ಜಿಲ್ಲೆ

ಎರಡು ವರ್ಷದ ಮಗನನ್ನು ಬಕೆಟ್​ ನೀರಿನಲ್ಲಿ ಮುಳುಗಿಸಿ ಕೊಂದು, ನೇಣು ಹಾಕಿಕೊಂಡ ತಾಯಿ!

ಮೈಸೂರು: ಎರಡು ವರ್ಷದ ಮಗನನ್ನು ಕೈಯಾರೆ ಕೊಂದ ತಾಯಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಪ್ರಕರಣವೊಂದು ವರದಿಯಾಗಿದೆ. ನಂಜನಗೂಡಿನ ಗಟ್ಟವಾಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ (22) ಮತ್ತು ಪುತ್ರ ಮೋಕ್ಷಿತ್ (2) ಸಾವಿಗೀಡಾದವರು. ಅನ್ನಪೂರ್ಣ ಮೊದಲು ಮಗನನ್ನು ಒಂದು ಬಕೆಟ್ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ಬಳಿಕ ತಾನು ನೇಣು ಹಾಕಿಕೊಂಡಿದ್ದಾಳೆ.

ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದ ಈಕೆ ಎರಡು ವರ್ಷಗಳ ಹಿಂದೆ ಮಹದೇವ ಪ್ರಸಾದ್‌ನನ್ನು ವಿವಾಹವಾಗಿದ್ದಳು. ದಂಪತಿ ಮಧ್ಯೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಆಗುತ್ತಿತ್ತು, ಅದೇ ಕಾರಣಕ್ಕೆ ಬೇಸತ್ತು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಸ್ಥಳಕ್ಕೆ ನಂಜನಗೂಡು ಡಿವೈಎಸ್​ಪಿ ಗೋವಿಂದರಾಜು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ, ದೊಡ್ಡಕವಲಂದೆ ಸಬ್​ ಇನ್​ಸ್ಪೆಕ್ಟರ್​ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.