ಚಿಕ್ಕಬಳ್ಳಾಪುರ: ನಿನ್ನೆ ಮನೆಯಿಂದ ಹೊರಗೆ ಹೋಗಿದ್ದ ತಾಯಿ-ಮಗ ಇಂದು ತೋಟದಲ್ಲಿನ ಸಂಪಿನಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿ ಗ್ರಾಮದ ನವಲತಾ (26) ಮತ್ತು ಆಕೆಯ ಪುತ್ರ ಅಂಜನ್ಕುಮಾರ್ (5) ಸಾವಿಗೀಡಾದವರು. ಇವರು ನಿನ್ನೆ ಸಂಜೆ ಮನೆಯಿಂದ ತೋಟದ ಕಡೆಗೆ ಹೋಗಿದ್ದವರು ಮರಳಿರಲಿಲ್ಲ.
ಹೀಗಾಗಿ ತೋಟಕ್ಕೆ ಹೋಗಿ ಹುಡುಕಾಡಿದಾಗ ಅಲ್ಲಿನ ಸಂಪ್ನಲ್ಲಿ ತಾಯಿ-ಮಗನ ಶವ ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವಲತ ಸಂಬಂಧಿಕರು ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.
ನವಲತಾ ಪತಿ ಸೊಣ್ಣೇ ಗೌಡ, ಆತನ ತಂದೆ ರಾಮಣ್ಣ, ತಾಯಿ ಪಿಳ್ಳಮ್ಮ, ಸೋದರರಾದ ಮುರಳಿ, ಚಂದ್ರು, ಗಾಯತ್ರಿ ಅವರ ಕಿರುಕುಳವೇ ಈ ಸಾವಿಗೆ ಕಾರಣ ಎಂದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.