ಆನೇಕಲ್: ಒಂಟಿ ಸಲಗ ಅಥವಾ ಬೆರಳೆಣಿಕೆಯ ಆನೆಗಳು ಕಾಣಿಸಿಕೊಳ್ಳುತ್ತಿದ್ದ ಆನೇಕಲ್ ಸುತ್ತಮುತ್ತಲ ಪ್ರದೇಶದಲ್ಲಿ ಇದೇ ಮೊದಲ ಸಲ 30ಕ್ಕೂ ಹೆಚ್ಚು ಕಾಡಾನೆಗಳು ಒಟ್ಟಿಗೇ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಆನೇಕಲ್-ಕನಕಪುರ ರಸ್ತೆಯ ತಟ್ಟೆಕೆರೆ ಬಳಿ ಆನೆಗಳ ದೊಡ್ಡ ಹಿಂಡು ರಸ್ತೆ ದಾಟಿರುವ ವಿಡಿಯೋ ದಾರಿಹೋಕರ ಮೊಬೈಲ್ಫೋನ್ನಲ್ಲಿ ಸೆರೆಯಾಗಿದ್ದು, ಬಿರುಸಾಗಿ ಕಾಡಾನೆಗಳು ಸಾಗುತ್ತಿರುವ ದೃಶ್ಯ ನಿಜಕ್ಕೂ ಮೈನವಿರೇಳಿಸುವಂತಿದೆ. ಹೀಗೆ ಕಾಡಾನೆಗಳು ಸಾಗುತ್ತಿರುವಾಗ ವಾಹನ ನಿಲ್ಲಿಸಿಕೊಂಡು ವಿಡಿಯೋ ಮಾಡಿಕೊಂಡಿರುವ ಸವಾರರು ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಆಗಾಗ ಒಂಟಿ ಸಲಗ ಅಥವಾ ಬೆರಳೆಣಿಕೆಯ ಆನೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇದೇ ಮೊದಲ ಸಲ ಎಂಬಂತೆ ಒಟ್ಟಿಗೆ 30 ಕಾಡಾನೆಗಳು ಹಿಂಡಿನಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಐದಕ್ಕೂ ಹೆಚ್ಚು ಮರಿಯಾನೆಗಳಿವೆ.
ಆನೆಗಳು ರಾಗಿಹಳ್ಳಿ ಸುತ್ತಮುತ್ತ ಈಗಾಗಲೇ ಬೆಳೆಗಳನ್ನು ಹಾಳುಮಾಡಿವೆ. ಈಗ ಈ ಹಿಂಡು ಮತ್ತಷ್ಟು ಬೆಳೆ ಹಾಳು ಮಾಡಲಿವೆಯೇನೋ ಎಂಬ ಆತಂಕದಲ್ಲಿದ್ದಾರೆ ರೈತರು. ತಮಿಳುನಾಡು ಭಾಗದಿಂದ ಆನೇಕಲ್ ವ್ಯಾಪ್ತಿಯ ಬನ್ನೇರುಘಟ್ಟಕ್ಕೆ ಬಂದಿರುವ ಕಾಡಾನೆಗಳು ಇವಾಗಿರಬಹುದು ಎಂದು ಅಂದಾಜಿಸಲಾಗಿದೆ.