ಜಿಲ್ಲೆ

4 ದಿನ ದಕ್ಷಿಣ, ಉತ್ತರ ಕರ್ನಾಟಕದಲ್ಲಿ ಇನ್ನಷ್ಟು ಮಳೆ: ನಾಳೆ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಹರೀಶ್​​ ಕೆ.ಸಿ.

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ, ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿಮುಂದಿನ ನಾಲ್ಕೈದು ದಿನ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಕಲಬುರಗಿಯ ಕಮಲಾಪುರ 18, ಯಾದಗಿರಿಯ ಸೈದಾಪುರ 12, ಚಾಮರಾಜನಗರದ ಎಂಎಂ ಹಿಲ್ಸ್ 9, ಚಿಕ್ಕಬಳ್ಳಾಪುರದ ಚಿಂತಾಮಣಿ 6, ಬೆಂಗಳೂರು ನಗರ ವೀಕ್ಷಣಾಲಯ 6, ಕೋಲಾರ 5 ಮತ್ತು ಕೊಪ್ಪಳದ ಗಂಗಾವತಿ 5 ಸೆಂಮೀ ಮಳೆಯಾಗಿತ್ತು. ಗುರುವಾರ ಮುಂಜಾನೆವರೆಗೆ ಕೆಲ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿದಿತ್ತು.

ಕಲಬುರಗಿ, ಕೊಪ್ಪಳ, ವಿಜಯಪುರ, ವಿಜಯನಗರ, ಯಾದಗಿರಿ, ಬಳ್ಳಾರಿಯಲ್ಲಿ ಸೆ.12ರಿಂದ ಮುಂದಿನ 3 ದಿನ ಮತ್ತು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಬೀದರ್‌ನಲ್ಲಿ ಸೆ.13ರಂದು ಜೋರಾಗಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಯೆಲ್ಲೋ ಘೋಷಿಸಲಾಗಿದೆ. ಮಂಡ್ಯ, ಮೈಸೂರಿನಲ್ಲಿ ಸೆ.12ರಂದು, ಬಾಗಲಕೋಟೆ, ಗದಗ, ಚಿತ್ರದುರ್ಗದಲ್ಲಿ ಸೆ.13ರಿಂದ ಮುಂದಿನ 2 ದಿನ ಹಾಗೂ ಬೆಳಗಾವಿ, ರಾಯಚೂರಿನಲ್ಲಿ ಸೆ.14ರಂದು ಯೆಲ್ಲೋ ಅಲರ್ಟ್ ಇರಲಿದೆ.

ಮಲೆನಾಡು, ಕರಾವಳಿ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಮೋಡ ಕವಿದ ವಾತಾವರಣದೊಂದಿಗೆ ಮಿಂಚು, ಬಿರುಗಾಳಿ ಸಹಿತ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.