ಕಾರವಾರ: ಹೊಸ ವರ್ಷದ ಸ್ವಾಗತಕ್ಕೆ ಮದ್ಯದ ಹೊಳೆಯೇ ಹರಿದಿದೆ.!!
ಜಿಲ್ಲೆಗೆ ಡಿಸೆಂಬರ್ ತಿಂಗಳಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡಿದ್ದು, ಸೇವಿಸಿದ ಮದ್ಯ ಹಾಗೂ ಬಿಯರ್ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.
ಮದ್ಯದಂಗಡಿಗಳು ಹಾಗೂ ಬಾರ್‌ಗಳು ಖರೀದಿಸುವ ಮದ್ಯದ ಲೆಕ್ಕವನ್ನು ಅಬಕಾರಿ ಇಲಾಖೆ ಇಡುತ್ತದೆ. 2022 ರ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 98,570 ಬಾಕ್ಸ್ ಮದ್ಯ ಬಳಕೆಯಾಗಿತ್ತು. ಈ ಬಾರಿ ಡಿಸೆಂಬರ್‌ನಲ್ಲಿ ಬಳಕೆಯಾದ ಮದ್ಯದ ಪ್ರಮಾಣ 1,02,332 ಬಾಕ್ಸ್ ಗೆ ತಲುಪಿದೆ. ಕಳೆದ ಬಾರಿಗೆ ಹೋಲಿಸಿದರೆ ಕೊನೆಯ ತಿಂಗಳಲ್ಲಿ 3762 ಬಾಕ್ಸ್ ಹೆಚ್ಚು ಮದ್ಯ ಬಳಕೆಯಾಗಿದೆ. 2022 ರಲ್ಲಿ ಡಿಸೆಂಬರ್ 1 ತಿಂಗಳಲ್ಲಿ 79,094 ಬಾಕ್ಸ್ ಬಿಯರ್ ಖಾಲಿಯಾಗಿತ್ತು. ಈ ವರ್ಷ ಜನರು 93,366 ಕೇಸ್ ಬಿಯರ್ ಹೀರಿದ್ದಾರೆ. 14,272 ಬಾಕ್ಸ್ ಬೀಯರ್ ಹೆಚ್ಚುವರಿ ಬಳಕೆಯಾಗಿದೆ.
ಡಿಸೆಂಬರ್ 31 ಒಂದೇ ದಿನದ ಇಷ್ಟು ಮದ್ಯ, ಬಿಯರ್ ಖರ್ಚಾಯಿತು ಎಂದು ನಿಖರವಾಗಿ ಲೆಕ್ಕ ಹೇಳಲು ಸಾಧ್ಯವಿಲ್ಲ. ಏಕೆಂದರೆ ಆ ದಿನಕ್ಕಾಗಿ ಬಾರ್ ಹಾಗೂ ಮದ್ಯದಂಗಡಿಗಳು ಎರಡು ವಾರ ಮುಂಚಿನಿಂದಲೇ ಸ್ಟಾಕ್ ಮಾಡುತ್ತವೇ ಹಾಗಾಗಿ ಇಡೀ ತಿಂಗಳ ಲೆಕ್ಕವನ್ನು ಪರಿಗಣಿಸಬಹುದು ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು. ಈ ವರ್ಷ ಡಿಸೆಂಬರ್ 31 ಕ್ಕಾಗಿ 10 ಕ್ಕೂ ಹೆಚ್ಚು ಹೋಟೆಲ್‌ಗಳು ತಾತ್ಕಾಲಿಕ ಮದ್ಯ ಮಾರಾಟದ ಪರವಾನಗಿ ಪಡೆದಿದ್ದವು. ಅಲ್ಲದೇ, ಬಾರ್‌ಗಳಲ್ಲೂ ಜನ ಮುಗಿಬಿದ್ದು ಮದ್ಯ ಖರೀದಿ ಪಾರ್ಟಿ ಮಾಡಿದ್ದರು.
ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಎಲ್ಲ ತಾಲೂಕುಗಳಲ್ಲಿ ಬೀಯರ್ ಬಳಕೆ ಕಳೆದ ವರ್ಷಕ್ಕಿಂತ ಹೆಚ್ಚಿದೆ. ಅಂಕೋಲಾ ಯಲ್ಲಾಪುರ ಹೊರತುಪಡಿಸಿ ಉಳಿದೆಲ್ಲ ಅಬಕಾರಿ ವಲಯಗಳಲ್ಲಿ ಮದ್ಯದ ಬಳಕೆಯೂ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಜಿಲ್ಲೆಗೆ ಈ ವರ್ಷ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದೂ ಇದಕ್ಕೆ ಕಾರಣ ಎನ್ನುತ್ತಾರೆ ಪ್ರವಾಸೋದ್ಯಮಿಗಳು.
ಇದನ್ನೂ ಓದಿ: ಹೋಟೇಲ್ ತ್ಯಾಜ್ಯ ಗುಂಡಿಯಲ್ಲಿ ಯುವಕನ ಶವ ಪತ್ತೆ