ಸಾಂದರ್ಭಿಕ ಚಿತ್ರ 
ಜಿಲ್ಲೆ

ಅನ್ಯಕೋಮಿನ ಪ್ರೇಮಿಗಳೆಂದು ಭಾವಿಸಿ ಅಕ್ಕ-ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ

Webdesk - Manjunatha B

ಬೆಳಗಾವಿ: ಅಕ್ಕ-ತಮ್ಮನನ್ನು ಪ್ರೇಮಿಗಳೆಂದು ಭಾವಿಸಿ ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ನೈತಿಕ ಪೊಲೀಸ್​ಗಿರಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆ ಕೋಟೆ ಕೆರೆ ಆವರಣದಲ್ಲಿ ನಡೆದಿದೆ.

ಘಟನೆ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, 15 ಮಂದಿ ತಲೆಮಾರಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವಬ ಯುವತಿ (24) ಹಾಗೂ ಯುವಕ (21) ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬೆಳಗಾವಿ ತಾಲ್ಲೂಕು ನಿವಾಸಿಗಳಾದ ಸಂತ್ರಸ್ತರಿಬ್ಬರು ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದರು. ಯುವತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಯುವಕ ಹಣೆ ಮೇಲೆ ತಿಲಕ ಇಟ್ಟಿದ್ದ. ಇದನ್ನು ನೋಡಿದ ಆರೋಪಿಗಳು ಇಬ್ಬರೂ ಅನ್ಯಕೋಮಿನವರು ಎಂದು ಭಾವಿಸಿ ಇವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

ನಂತರ ಕೊಠಡಿ ಒಂದರಲ್ಲಿ ಕೂಡಿ ಹಾಕಿ ಇವರ ಮೊಬೈಲ್​ಗಳನ್ನು ಕಸಿದುಕೊಂಡಿರುವ ಆರೋಪಿಗಳು ಚಿತ್ರಹಿಂಸೆ ನೀಡಿದ್ಧಾರೆ. ಯುವತಿ ಉಪಾಯ ಮಾಡಿ ತನ್ನ ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ವಾಟ್ಸ್​ಆ್ಯಪ್​ನಲ್ಲಿ ಲೊಕೇಷನ್​ ಶೇರ್​ ಮಾಡಿದ್ದಾಳೆ. ವಿಷಯ ತಿಳಿದ ಪೋಷಕರು ಲೈವ್ ಲೋಕೇಶನ್ ಆಧರಿಸಿ ಸ್ಥಳಕ್ಕೆ ಬಂದು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಪೋಷಕರು ಬರುತ್ತಿದ್ದಂತೆ ಪುಂಡರ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. 16 ಜನರಲ್ಲಿ ಒರ್ವನನ್ನು ವಶಕ್ಕೆ ಪಡೆಯಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಸಹೋದರಿ, ಸಹೋದರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.