ಮೂಡುಬಿದಿರೆ: ಪುರಸಭೆ ಅಧೀನದಲ್ಲಿರುವ ಮೂಡುಬಿದಿರೆ ಬಸ್ ನಿಲ್ದಾಣ ಹಾಗೂ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿನ ಅವ್ಯವಸ್ಥೆಗಳ ಬಗ್ಗೆ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮರ್ಪಕ ಕಾಮಗಾರಿ ಹಾಗೂ ವಾರ್ಡ್‌ಗಳಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿದರು.
ಸದಸ್ಯ ಸುರೇಶ್ ಕೋಟ್ಯಾನ್ ಮಾತನಾಡಿ, ಬಸ್ ನಿಲ್ದಾಣದ ಸುತ್ತಮುತ್ತ ಅವ್ಯವಸ್ಥೆ ತಾಂಡವವಾಡುತ್ತಿದೆ. ಅಪೂರ್ಣ ಸ್ಥಿತಿಯಲ್ಲಿರುವ ಇಂದಿರಾ ಗಾಂಧಿ ಕಾಂಪ್ಲೆಕ್ಸ್‌ನ ಮೇಲಂತಸ್ತಿನ ಕಾಮಗಾರಿಯಿಂದಾಗಿ ಅಲ್ಲಿ ಶಟರ್ ತೆರೆದಿರುವ ಕೋಣೆಗಳು ಗುಜರಿ ಸಂಗ್ರಹಿಸುವ ಕೋಣೆಗಳಾಗುತ್ತಿವೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 20 ಕೊಠಡಿಗಳು ಕಳೆದ ಆರು ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಇಂದಿರಾ ಗಾಂಧಿ ಕಾಂಪ್ಲೆಕ್ಸ್, ಸುಲಭ ಶೌಚಗೃಹದ ಆವರಣ ಕೊಳಚೆಯಿಂದ ಕೂಡಿದೆ. ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಐದು ವರ್ಷಗಳಿಂದ ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದ್ದರೂ ಯಾವುದೇ ಸ್ಪಂದನೆ ಇಲ್ಲ ಎಂದು ಸದಸ್ಯೆ ಶ್ವೇತಾ ಪ್ರವೀಣ್ ಧ್ವನಿಗೂಡಿಸಿದರು. ಸ್ಥಳ ಪರಿಶೀಲನೆ ಮಾಡಿ ಶೀಘ್ರ ಸಮಸ್ಯೆ ಪರಿಹರಿಸುವುದಾಗಿ ಮುಖ್ಯಾಧಿಕಾರಿ ಇಂದು ಎಂ. ಭರವಸೆ ನೀಡಿದರು. ಸ್ಥಳ ಪರಿಶೀಲನೆ ಮಾಡಿ ಸುಮ್ಮನಿರುವುದಲ್ಲ. ಯಾವುದೆಲ್ಲ ಸಮಸ್ಯೆ ಪರಿಹರಿಸಲಾಗಿದೆ ಎನ್ನುವ ವಿಚಾರವನ್ನು ಫೋಟೋ ಸಹಿತ ಮುಂದಿನ ಸಭೆಯ ಗಮನಕ್ಕೆ ತರುವಂತೆ ಹಿರಿಯ ಸದಸ್ಯ ಪಿ.ಕೆ.ಥೋಮಸ್ ಸಲಹೆ ನೀಡಿದರು.
ಸ್ಥಾಯಿ ಸಮಿತಿಯ ಅಧ್ಯಕ್ಷೆ ಸ್ವಾತಿ ಪ್ರಭು, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಸುರೇಶ್ ಪ್ರಭು, ಪ್ರಸಾದ್ ಕುಮಾರ್, ರೂಪಾ ಸಂತೋಷ್ ಶೆಟ್ಟಿ, ಮಮತಾ ಆನಂದ್, ಪರಿಸರ ಅಭಿಯಂತೆ ಶಿಲ್ಪಾ ಎಸ್, ಕಂದಾಯ ಅಧಿಕಾರಿ ಜ್ಯೋತಿ ಎಸ್, ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಕಚೇರಿ ವ್ಯವಸ್ಥಾಪಕಿ ಯಶಸ್ವಿನಿ, ಜೂನಿಯರ್ ಇಂಜಿನಿಯರ್ ನಳಿನ್ ಕುಮಾರ್, ಪ್ರಥಮ ದರ್ಜೆ ಸಹಾಯಕಿ ಮೀನಾಕ್ಷಿ ಚರ್ಚೆಯಲ್ಲಿ ಪಾಲ್ಗೊಂಡರು.
ವಸತಿ ಸಮುಚ್ಚಯದಿಂದ ಗಲೀಜು ನೀರು
ವಿದ್ಯಾಗಿರಿಯ ವಸತಿ ಸಮುಚ್ಚಯದ ಗಲೀಜು ನೀರನ್ನು ಸಾರ್ವಜನಿಕ ಸ್ಥಳಕ್ಕೆ ಬಿಡುವುದರಿಂದ ತೊಂದರೆಯಾಗುತ್ತಿದೆ ಎಂದು ದಿವ್ಯಾ ಜಗದೀಶ್ ಸಮಸ್ಯೆ ತೋಡಿಕೊಂಡರು. ಮೂಡುಬಿದಿರೆಯ ಹಲವು ವಸತಿ ಸಮುಚ್ಚಯಗಳಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸದಸ್ಯರು ಸಲಹೆ ನೀಡಿದರು. ಎಲ್ಲ ವಸತಿ ಸಮುಚ್ಚಯಗಳಿಗೆ ಎಸ್‌ಟಿಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.
ಜಲಜೀವನ್ ಮಿಷನ್‌ನಲ್ಲಿ ಪಾಲನೆಯಾಗದ ನಿಯಮ
ಜಲಜೀವನ್ ಮಿಷನ್‌ನ ಕಾಮಗಾರಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಕೆಲವೆಡೆ ಕೇವಲ 9 ಇಂಚು ಆಳದಲ್ಲಿ ಪೈಪ್ ಅಳವಡಿಸಿದ್ದಾರೆ. ಇದನ್ನು ಪರಿಶೀಲಿಸುವವರು ಯಾರು? ಎಂದು ಸದಸ್ಯರು ಪ್ರಶ್ನಿಸಿದರು. ಸಂಬಂಧಪಟ್ಟ ಇಲಾಖೆಗೆ ಕಾಮಗಾರಿ ಸ್ಥಗಿತಗೊಳಿಸಲು ನೋಟಿಸ್ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು. ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ. ಫಾಸ್ಟ್‌ಫುಡ್ ಸ್ಟಾಲ್‌ಗಳು ತ್ಯಾಜ್ಯ ಆಹಾರವನ್ನು ಬೀದಿನಾಯಿಗಳಿಗೆ ಎಸೆಯುವುದರಿಂದ ಸಮಸ್ಯೆಯಾಗುತ್ತಿದೆ ಎಂದು ರಾಜೇಶ್ ನಾಯ್ಕ, ಕೊರಗಪ್ಪ ಮತ್ತಿತರರು ಸಭೆಯ ಗಮನಕ್ಕೆ ತಂದರು.