ಜಿಲ್ಲೆ

ರಾಜ್ಯದಲ್ಲಿ ಈ ವರ್ಷವೂ ಮುಂಗಾರು ಆಶಾದಾಯಕ: ಐಎಂಡಿ ವರದಿ

ಬೆಂಗಳೂರು:ರಾಜ್ಯದಲ್ಲಿ ಈ ವರ್ಷವೂ ಮುಂಗಾರು (ನೈಋತ್ಯ ಮಾನ್ಸೂನ್​) ಆಶಾದಾಯಕವಾಗಿದೆ. ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದುಬಂದಿದೆ.

ಫೆಸಿಫಿಕ್​ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿ.ಸೆ.ನಿಂದ 1.5 ಡಿ.ಸೆ.ವರೆಗೆ ಹೆಚ್ಚು ದಾಖಲಾದರೆ "ಎಲ್​ ನಿನೋ' ಉಂಟಾಗುತ್ತದೆ. ಫೆಸಿಫಿಕ್​ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ "ಲಾ-ನಿನಾ' ಎಂದು ಕರೆಯಲಾಗುತ್ತಿದೆ. ಎಲ್​ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮಳೆ ಮೇಲೆ ಪರಿಣಾಮ ಬೀರುತ್ತದೆ. 2023-24ರಲ್ಲಿ ಎಲ್​ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿತ್ತು. ಇದರಿಂದ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು.

ಕಳೆದ ವರ್ಷ "ಲಾ-ನಿನಾ' ಪರಿಣಾಮದಿಂದ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಫೆಸಿಫಿಕ್​ ಮತ್ತು ಹಿಂದು ಮಹಾಸಾಗರದಲ್ಲಿ "ಲಾ-ನಿನಾ' ತಟಸ್ಥವಾಗಿದೆ. ಹಿಂದು ಮಹಸಾಗರದ ದ್ವಿಧ್ರುವಿ (ಐಒಸಿ) ಪರಿಸ್ಥಿತಿಯೂ ತಟಸ್ಥವಾಗಿದೆ. ಈ ಎಲ್ಲ ಕಾರಣಗಳಿಂದ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೆ, ಕರಾವಳಿ ಹಾಗೂ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ತುಸು ಅಧಿಕ ವರ್ಷಧಾರೆಯಾಗಲಿದೆ. ರಾಜ್ಯದಲ್ಲಿ ಯಾವಾಗ ಮುಂಗಾರು ಮಾರುತಗಳು ಆಗಮಿಸುವ ಬಗ್ಗೆ ಮೇ ಕೊನೆಯ ವಾರದಲ್ಲಿ ನಿಖರ ಮಾಹಿತಿ ದೊರೆಯಲಿದೆ.

ಜೂ.1ರಿಂದ ಆರಂಭವಾಗುವ ನೈಋತ್ಯ ಮಾನ್ಸೂನ್​ ಸೆ.30ರವರೆಗೆ ಇರಲಿದೆ. ಈ ಅವಧಿಯಲ್ಲಿ ದೇಶದಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೂ ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಮಳೆ ಸುರಿಯಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿ ರೈತರಿಗೆ ವರದಾನವಾಗಲಿದೆ.

| ಡಾ.ಶ್ರೀನಿವಾಸರೆಡ್ಡಿ. ಹಿರಿಯ ಹವಾಮಾನ ತಜ್ಞ.