ಮುಧೋಳ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ರೈತ ಮುಖಂಡ ಈರಪ್ಪ ಹಂಚನಾಳ ಮಾತನಾಡಿದರು. ಎಸಿ ಸಂತೋಷ ಕಾಮಗೌಡ, ಸಿಪಿಐ ಮಹಾದೇವ ಶಿರಹಟ್ಟಿ, ಬಸವಂತ ಕಾಂಬಳೆ, ಮಹೇಶ ಪಾಟೀಲ ಇದ್ದರು. 
ಜಿಲ್ಲೆ

ವಾರದೊಳಗೆ ರೈತರ ಖಾತೆಗೆ ಹಣ

ಗಿರೀಶ ಸಗರ

ಮುಧೋಳ: ಜಿಲ್ಲೆಯ ತಿಮ್ಮಾಪುರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಳೆದ ಹಂಗಾಮಿನಲ್ಲಿ ಕಬ್ಬು ಕಳುಹಿಸಿದ ರೈತರಿಗೆ ವಾರದೊಳಗಾಗಿ ಹಣ ಸಂದಾಯವಾಗಲಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರೈತರ ಖಾತೆಗಳಿಗೆ ಹಣ ಜಮಾ ಮಾಡುವ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲಿ ಅವರಿಗೆ ಹಣ ದೊರೆಯಲಿದೆ ಎಂದು ತಿಳಿಸಿದರು.

ರೈತ ಮುಖಂಡ ಬಸವಂತ ಕಾಂಬಳೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಎಸಿ ದಾಖಲೆಗಳ ಸಮೇತ ಉತ್ತರ ನೀಡಿದರು. ಕಾರ್ಖಾನೆ ಆಡಳಿತ ಮಂಡಳಿ ರಾಜೀನಾಮೆ ನೀಡಿದ್ದು, ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ಆಗಬೇಕಾಗಿತ್ತು. ನನ್ನನ್ನು ವಿಶೇಷ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಕಾರ್ಖಾನೆ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಇಲ್ಲಿ ಕೋಟ್ಯಂತರ ಹಣದ ವ್ಯವಹಾರ ನಡೆದಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖೆ ಕಾರ್ಯ ಮುಗಿದ ನಂತರ ವಿವರವನ್ನು ಕಾರ್ಖಾನೆಯ ಷೇರುದಾರರ ಸಭೆ ಕರೆದು ತಿಳಿಸುವುದಾಗಿ ಹೇಳಿದರು.

ತಹಸೀಲ್ದಾರ್ ವಿನೋದ ಹತ್ತಳ್ಳಿ, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಅಜೀತರೆಡ್ಡಿ ಹೊಸಮನಿ, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ರುದ್ರಪ್ಪ ಅಡವಿ, ದುಂಡಪ್ಪ ನೀಲಿ, ದುಂಡಪ್ಪ ಯರಗಟ್ಟಿ, ಮಹೇಶ ಪಾಟೀಲ ಭಾಗವಹಿಸಿದ್ದರು.