ಬೆಳ್ತಂಗಡಿ: ಮೂಡುಬಿದಿರೆಯ ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಶೋರಿನ್ ರಿಯು ಕರಾಟೆ ಅಸೋಸಿಯೇಶನ್ ಮತ್ತು ಸ್ವಾಮಿಸ್ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಷಿಪ್-2024 ಸ್ಪರ್ಧೆಯಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರೆಯ್ಯನ್ ಕರಾಟೆ ಫೈಟಿಂಗ್ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು 2 ಚಿನ್ನದ ಪದಕ ಸಹಿತ ಎರಡನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಹಮ್ಮದ್ ರೆಯ್ಯನ್ ಈ ಹಿಂದೆ ಹಾಸನದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಸೆನ್ಸಾಯಿ ಅಬ್ದುಲ್ ರೆಹಮಾನ್ ಅವರಲ್ಲಿ ತರಬೇತಿ ಪಡೆದಿರುವ ಇವರು ಉಜಿರೆ ಗಾಂಧಿನಗರ ನಿವಾಸಿ, ಉದ್ಯಮಿ ಬಿ ಎಚ್.ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ.
ಶೋರಿನ್ ರಿಯು ಕರಾಟೆ ಅಸೋಸಿಯೇಶನ್‌ನ ಚೀಫ್ ಇನ್ಸ್ಟ್ರಕ್ಟರ್ ನದೀಮ್, ಸಂಘಟನಾ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಸ್ವಾಮಿಪ್ರಸಾದ್ ಮತ್ತು ದೈಹಿಕ ಶಿಕ್ಷಣ ಕಾಲೇಜು ಪ್ರಾಚಾರ್ಯ ಧನಂಜಯ ಶೆಟ್ಟಿ ಪ್ರಶಸ್ತಿ ಪತ್ರ ವಿತರಿಸಿದರು.