ಕಾರವಾರ: ಶಿರಸಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಚುನಾವಣಾ ಪ್ರಚಾರ ಸಭೆ ನಡೆಸಿದರು. ಮೋದಿ ನೋಡುವ ಸಲುವಾಗಿ ಸಾವಿರಾರು ಜನ ಆಗಮಿಸಿದ್ದರು. ಬಿಸಿಲಲ್ಲಿ ನಿಂತು ನಾಲ್ಕು ತಾಸು ಕಾದು ಮೋದಿ ಕಾಣದಿದ್ದರೂ ಅವರ ಹೆಲಿಕಾಫ್ಟರ್‌ಗೆ ಕೈ ಮಾಡಿದವರೆಷ್ಟೋ ಜನ. ಅವರು ವೇದಿಕೆಯ ಮೇಲೆ ಕೈ ಮುಗಿಯುತ್ತಿದ್ದಾಗ. ದೂರದಲ್ಲೇ ನಿಂತು ನಮಸ್ಕಾರ ಮಾಡಿದವರೆಷ್ಟೋ ಜನ. ಆದರೆ, ವೇದಿಕೆಯ ಮೇಲೆ ಇರುವ ಪಕ್ಷದ ಗಣ್ಯ ರನ್ನು ಬುಟ್ಟು ಇನ್ನೂ ಕೆಲವರಿಗೆ ಮೋದಿ ಅವರನ್ನು ಹತ್ತಿರದಿಂದ ಭೇಟಿಯಾಗಿ ಮಾತನಾಡಿಸುವ ಅವಕಾಶ ಸಿಕ್ಕಿತು. ಅದರಲ್ಲಿ ಹೂ ಮಾರುವವರು, ಕ್ಷೌರಿಕ, ಮರ ಕಡಿಯುವ ಕಾರ್ಮಿಕ, ಪೌರ ಕಾರ್ಮಿಕ ಮಹಿಳೆಯೂ ಇರುವುದು ವಿಶೇಷ.
ಶಿರಸಿಯಲ್ಲಿ ಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾದ ನಾಲ್ವರು ವಿಶೇಷ ವ್ಯಕ್ತಿಗಳು ಈಗ ರಾಜ್ಯದ ಗಮನ ಸೆಳೆದಿದ್ದಾರೆ. ಸ್ವಚ್ಛತೆಯ ರೂವಾರಿಗಳು, ಕರಸೇವರು ಹಾಗೂ ಮೋದಿ ಅಭಿಮಾನಿಯ ಭೇಟಿಯ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ಅವರು ಪ್ರತಿ ಊರಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದಾಗಲೂ ಹೆಲಿಕಾಪ್ಟರ್ ಅಥವಾ ವಿಮಾನ ಇಳಿದು ವೇದಿಕೆಗೆ ಬರುವ ಮಾರ್ಗದಲ್ಲಿ ಪಕ್ಷದ ಪ್ರಮುಖರನ್ನು, ಅಭಿಮಾನಿಗಳನ್ನು, ವಿವಿಧ ಕ್ಷೇತ್ರದ ಗಣ್ಯರನ್ನು ಭೇಟಿಯಾಗಿ ಕುಶಲ ವಿಚಾರಿಸಿ ನಮಸ್ಕರಿಸುವ ಪರಿಪಾಠ ಇದೆ. ಭಾನುವಾರ ಶಿರಸಿಯಲ್ಲಿ 60 ಜನರನ್ನು ಭೇಟಿಯಾದರು. ಅದರಲ್ಲಿ ಪಕ್ಷದ ಪ್ರಮುಖರಲ್ಲದೇ ಎಲೆಮರೆಯ ಕಾಯಿಯಂತಿರುವ ವಿಶೇಷ ಸಾಧಕರಿದ್ದರು.
ಅಂದ್ಹಾಗೆ 2023 ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅಂಕೋಲಾಕ್ಕೆ ಆಗಮಿಸಿದ್ದ ನರೇಂದ್ರ ಮೋದಿ ಅವರು ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರನ್ನು ಭೇಟಿಯಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಿ ಗಮನ ಸೆಳೆದಿದ್ದರು.
ಅಂಕೋಲಾದ ಮೋಹಿನಿ ಗೌಡ ಅಲ್ಲಿನ ಬಸ್ ನಿಲ್ದಾಣದಲ್ಲಿ ಕಾಡು ಹಣ್ಣುಗಳನ್ನು ಮಾರುವವರು. ಅಕ್ಷರ ಬಾರದ ಹಾಲಕ್ಕಿ ಒಕ್ಕಲಿಗ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದಾಕೆ. ಕಾಡಿನ ಎಲೆಗಳಲ್ಲಿ, ನೇರಳೆ, ಮುಳ್ಳೆ ಹಣ್ಣುಗಳನ್ನು ಕಟ್ಟಿ ಮಾರುತ್ತಾರೆ. ಅವುಗಳನ್ನು ಖರೀದಿಸುವ ಪ್ರಯಾಣಿಕರು ಹಣ್ಣು ತಿಂದು ಎಲೆಗಳನ್ನು ನಿಲ್ದಾಣದಲ್ಲಿ ಬಿಸಾಡಿ ಹೋಗುತ್ತಾರೆ. ಆದರೆ, ತನ್ನ ಜವಾಬ್ದಾರಿ ಅರಿತ ಮೋಹಿನಿ ಬಿಸಾಡಿದ ಎಲೆಗಳನ್ನು ಹಾಗೂ ಬಸ್ ನಿಲ್ದಾಣದಲ್ಲಿರುವ ಇತರ ಕಸಗಳನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುತ್ತಾರೆ. ಇದು ಆಕೆಯ ನಿತ್ಯದ ಕಾಯಕ. ಕಳೆದ ವರ್ಷ ಆಕೆ ಮಾಡುವ ಕಾರ್ಯವನ್ನು ಯಾರೋ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋವನ್ನು ಮಹಿಂದ್ರಾ ಮೋಟರ್ಸ್ ಕಂಪನಿಯ ಮುಖ್ಯಸ್ಥ ಆನಂದ ಮಹಿಂದ್ರಾ ಟ್ವೀಟ್ ಮಾಡಿದ್ದರು. ನಂತರ ಮೋಹಿನಿ ಪ್ರಸಿದ್ಧರಾಗಿದ್ದರು. ಆಕೆಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಸ್ವಚ್ಛ ಭಾರತ ಅಭಿಯಾನದ ರೂವಾರಿ ನರೇಂದ್ರ ಮೋದಿ ಹಾಗೂ ಸ್ವಚ್ಛತೆಯ ರೂವಾರಿ ಮೋಹಿನಿ ಗೌಡ ಅವರ ಭೇಟಿಯ ಕ್ಷಣ ವಿಶೇಷವಾಗಿತ್ತು.
ಬಾಬ್ರಿ ಮಸೀದಿ ಕರಸೇವನಾಗಿ ಪಾಲ್ಗೊಂಡು ಮೂರು ದಿನಗಳ ಕಾಲ ಅಯೋಧ್ಯೆಯಲ್ಲೇ ಇದ್ದ ಸಿದ್ದಾಪುರ ತಾಲೂಕಿನ ಹೇರೂರಿನ ಡೊಂಬೆ ಲಕ್ಷ್ಮಣ ನಾಯ್ಕ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ರಾಮ ಮಂದಿರ ನಿರ್ಮಾಣವಾಗುವವರೆಗೂ ಗಡ್ಡ ತೆಗೆಯದಿರಲು ಅವರು ನಿರ್ಧರಿಸಿದ್ದರು. ಮರ ಕೆಲಸ ಮಾಡುವ ಅವರು ಬರಿಗಾಲಲ್ಲೇ ಸಂಚರಿಸುತ್ತಾರೆ. ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ನರೇಂದ್ರ ಮೋದಿ ಅವರ ಅಭಿಮಾನಿಯಾದ ಅವರು ಭಾನುವಾರ ಮೋದಿ ಅವರನ್ನು ಭೇಟಿಯಾಗಿ ನಮಸ್ಕರಿಸಿದರು.
ಶಿರಸಿ ನಗರಸಭೆಯಲ್ಲಿ ದೀರ್ಘ ಕಾಲ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದವರು ರಾಧಾ ಹರಿಜನ. ಜೀವನ ಪೂರ್ತಿ ಊರಿನ ಸ್ವಚ್ಛತೆಗಾಗಿ ಶ್ರಮಿಸಿದ ಅವರ ಕಾರ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೇಳಿ, ಪ್ರಣಾಮ ಮಾಡಿದರು.
ಅಂಕೋಲಾದಲ್ಲಿ ಸಲೂನ್ ಹೊಂದಿದ ನಾಗೇಶ ಮಹಾಲೆ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ. ಅವರು ತಮ್ಮ ಕೈ ಮೇಲೆ ಮೋದಿ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹಿಂದೆ ಬಿಜೆಪಿ ಚುನಾವಣೆ ಗೆದ್ದಾಗ ಇಡೀ ದಿನ ಉಚಿತವಾಗಿ ಕ್ಷೌರ ಮಾಡಿದ್ದರು. ಅವರ ನಿಷ್ಕಾಮ ಸೇವೆಯನ್ನು ಗುರುತಿಸಿ ಬಿಜೆಪಿ ಅವಕಾಶ ಮಾಡಿಕೊಟ್ಟಿತ್ತು.