ಕನಕಗಿರಿಯ ತಾಪಂ ಸಭಾಂಗಣದಲ್ಲಿ ಮತದಾರರ ಪರಿಷ್ಕರಣಾ ತಬೇತಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ, ಪ್ರಾಧ್ಯಾಪಕರಾದ ಮಂಜುನಾಥ, ಮರ್ವಿನ್ ಡಿಸೋಜಾ, ವೀರೇಶ ಕೆಂಗಲ್ ಇತರರಿದ್ದರು. 
ಜಿಲ್ಲೆ

ಮೊಬೈಲ್‌ನಲ್ಲೇ ಪರಿಷ್ಕರಣೆಗೆ ಅವಕಾಶ

Kopala - Desk - Eraveni

ಕನಕಗಿರಿ: ಶಿಕ್ಷಣ ಇಲಾಖೆಯೆಂದರೆ ಸಮುದ್ರವಿದ್ದಂತೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರಿರುವುದರಿಂದ ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆಗೆ ನೇಮಿಸಲಾಗುತ್ತದೆ. ಕಾಲಕಾಲಕ್ಕೆ ನಿರ್ದೇಶನದಂತೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಎಲ್‌ಒಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಈ ಹಿಂದೆ ವಿವಿಧ ರೀತಿ ನಮೂನೆಗಳ ಅರ್ಜಿಗಳನ್ನು ಭರ್ತಿ ಮಾಡಿ ಮತದಾರರ ಪರಿಷ್ಕರಣೆ ಮಾಡಲಾಗುತ್ತಿತ್ತು. ಈಗ ಮೊಬೈಲ್ ಮೂಲಕ ಪರಿಷ್ಕರಣೆ ಮಾಡಲು ಅವಕಾಶ ನೀಡಲಾಗಿದೆ. ಪರಿಷ್ಕರಣೆ ಪ್ರಕ್ರಿಯೆ ಕುರಿತು ತರಬೇತಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ಮೊಬೈಲ್ ಮೂಲಕವೇ ತಿದ್ದುಪಡಿ, ತೆಗೆದು ಹಾಕುವುದು, ಹೊಸ ಸೇರ್ಪಡೆ ಸೇರಿ ನಾನಾ ನಮೂನೆಗಳನ್ನು ಮೊಬೈಲ್ ಆ್ಯಪ್‌ನಲ್ಲಿಯೇ ತುಂಬುವುದಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ ಎಂದರು.

ಬಿಎಲ್‌ಒ ಉಮೇಶ ಮಾತನಾಡಿ, ಬಿಎಲ್‌ಒಗಳು ಆಗಿರುವವರು ಬಹುತೇಕರು ಶಾಲೆಗಳ ಮುಖ್ಯ ಶಿಕ್ಷಕರಾಗಿದ್ದೇವೆ. ನಮಗೆ ಶಾಲೆಯಲ್ಲಿ ಹತ್ತಾರು ಕೆಲಸಗಳಿದ್ದರೂ ಬಿಎಲ್‌ಒಗಳಾಗಿ ಕಾರ್ಯನಿರ್ವಹಿಸುವ ಶಕ್ತಿಯಿದೆ. ನಮಗೆ ಕಿಟ್‌ಗಳನ್ನು ಒದಗಿಸಬೇಕು. ನಮಗೆ ಅರಿವಿಲ್ಲದೇ ಮತದಾರರ ಪಟ್ಟಿ ಪರಿಷ್ಕರಣೆಯಾಗುವುದನ್ನು ತಡೆಯಬೇಕು. ಅನಾರೋಗ್ಯದಿಂದ ಬಳಲುವವರನ್ನು ಬಿಎಲ್‌ಒ ಕಾರ್ಯದಿಂದ ಮುಕ್ತಿಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರಾಧ್ಯಾಪಕರಾದ ಮಂಜುನಾಥ, ಮರ್ವಿನ್ ಡಿಸೋಜಾ, ವೀರೇಶ ಕೆಂಗಲ್ ತರಬೇತಿ ನೀಡಿದರು. ಪಪಂ ಮುಖ್ಯಾಧಿಕಾರಿ ಲಕ್ಷ್ಣಣ್ ಕಟ್ಟಿಮನಿ, ತಹಸಿಲ್ ಕಚೇರಿ ನೌಕರ ಶರಣು, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಬಿಎಲ್‌ಒಗಳಿದ್ದರು.