ಜಿಲ್ಲೆ

ನಿಮ್ಮ ಹಾಟ್ ಫೋಟೋ ಕಳಿಸಿ ಹಣ ಕೊಡುತ್ತೇನೆ ನೆಮ್ಮದಿ ಜೀವನ ನಡೆಸಿ: ಬೆಚ್ಚಿದ ಮಹಿಳೆಯರು!

ಬೆಂಗಳೂರು: ಮಹಿಳೆಯೊಬ್ಬರ ಮೊಬೈಲ್​ ನಂಬರ್​ ಹ್ಯಾಕ್​ ಮಾಡಿ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳಹಿಸಿರುವ ಪ್ರಸಂಗ ನಗರದಲ್ಲಿಂದು ವರದಿಯಾಗಿದ್ದು, ಹ್ಯಾಕರ್ಸ್ ಹಾವಳಿಯಿಂದ ಬೇಸತ್ತು ಮಹಿಳೆ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಬಸವನಗುಡಿ ನಿವಾಸಿ 36 ವರ್ಷದ ವಿವಾಹಿತ ಮಹಿಳೆ ಹಾಗೂ ಅವರ ಸ್ನೇಹಿತರು ಸೇರಿ ಒಂದು ವಾಟ್ಸ್​ಆ್ಯಪ್​ ಗ್ರೂಪ್ ಕ್ರಿಯೇಟ್ ಮಾಡಿದ್ದರು. ಆ ಗ್ರೂಪ್​ನಲ್ಲಿ ಸಂತ್ರಸ್ತ ಮಹಿಳೆಯೂ ಕೂಡ ಅಡ್ಮಿನ್ ಆಗಿದ್ದರು. ಯಾರೋ ಅಪರಿಚಿತರು ಕರೆ ಮಾಡಿ ನಿಮಗೆ ಒಂದು ಲಿಂಕ್ ಕಳುಹಿಸಿದ್ದೇವೆ. ಅದನ್ನ ಓಪನ್ ಮಾಡಿ ನೋಡಿ ಎಂದು ಕಾಲ್ ಕಟ್ ಮಾಡಿದ್ದಾರೆ.

ಹಿಂದು-ಮುಂದು ಯೋಚಿಸದೇ ಮಹಿಳೆ ಲಿಂಕ್ ಓಪನ್ ಮಾಡಿದ್ದಂತೆಯೇ ನಂಬರ್ ಹ್ಯಾಕ್ ಆಗಿದೆ. ಬಳಿಕ ಗ್ರೂಪ್​ನಲ್ಲಿರೋ ಎಲ್ಲ ನಂಬರ್​ಗೆ ಕೆಲ ಅಶ್ಲೀಲ ಫೋಟೋ ಕಳುಹಿಸಲಾಗಿದೆ. ಅಷ್ಟೇ ಅಲ್ಲದೇ ಮಹಿಳೆ ನಂಬರ್​ನಿಂದ ಅಶ್ಲೀಲ ವಿಡಿಯೋಗಳನ್ನೂ ಕಳುಹಿಸಿದ್ದಾರೆ.

ಇದಾದ ಬಳಿಕ ಮಹಿಳೆಯ ನಂಬರ್​ನಿಂದ ಸ್ನೇಹಿತರಿಗೆ ಪರ್ಸನಲ್ ಮೆಸೇಜ್ ಮಾಡಿ ನಿಮ್ಮ ಹಾಟ್ ಫೋಟೋ ಕಳುಹಿಸಿ, ಒಂದೊಂದು ಫೋಟೋಗೆ ಇಂತಿಷ್ಟು ಹಣ ಕೊಡುತ್ತೇನೆ. ನೀವು ಆರಾಮಾಗಿ ಜೀವನ ನಡೆಸಬಹುದು ಎಂದು ಮೆಸೇಜ್ ಮಾಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಶಾಕ್​ಗೆ ಒಳಗಾದ ಮಹಿಳೆ, ಗೌರವಕ್ಕೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ನಗರದ ದಕ್ಷಿಣ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)