ಬೆಳ್ತಂಗಡಿ: ನಾರಾವಿ ಗ್ರಾಮ ಪಂಚಾಯಿತಿಗೆ ವಿಧಾನಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು ಬುಧವಾರ ಭೇಟಿ ನೀಡಿದರು.
ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಿಡಿಒ ಹಾಗೂ ಕಾರ್ಯದರ್ಶಿ ಜತೆಗೆ ಸಭೆ ನಡೆಸಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಿದರು. ನರೇಗಾ, ಪ್ರಧಾನ ಮಂತ್ರಿ ಆವಾಸ್ ಯೋಜನೆ, 15ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್, ರಾಜ್ಯ ಸರ್ಕಾರದ ಬಸವ ವಸತಿ, ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ ಪಡೆದು ಮಾರ್ಗದರ್ಶನ ನೀಡಿದರು.
ಏಕ ನಿವೇಶನ ವಿನ್ಯಾಸ ಅನುಮೋದನೆ, ಕಟ್ಟಡ ನಕ್ಷೆ ಅನುಮೋದನೆ, ಅಭಿವೃದ್ಧಿ ಕಾರ್ಯಗಳಿಗೆ ಎದುರಾಗುತ್ತಿರುವ ಅಡಚಣೆಗಳು ಸಹಿತ ಸ್ಥಳೀಯಾಡಳಿತ ವಿಷಯಗಳ ಕುರಿತು ಚರ್ಚಿಸಲಾಯಿತು. ಸ್ವಂತ ಆದಾಯ ಹೆಚ್ಚಿಸಲು ನಾರಾವಿ ಗ್ರಾಮ ಪಂಚಾಯತಿ ಕೈಗೊಂಡ ಕ್ರಮಗಳು, ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸುವುದು ಸಹಿತ ಜನಪೂರಕ ಆಡಳಿತ ನೀಡುತ್ತಿರುವ ಗ್ರಾ.ಪಂ ಕುರಿತು ಕಿಶೋರ್‌ಕುಮಾರ್ ಮೆಚ್ಚುಗೆ ಸೂಚಿಸಿದರು.