ಜಿಲ್ಲೆ

ಶಾಸಕರಿಂದ ಅಶ್ಲೀಲ ಪ್ರಕರಣ ಆರೋಪಿಯ ಭೇಟಿ : ಉಮಾನಾಥ ಕೋಟ್ಯಾನ್ ವಿರುದ್ಧ ಮಿಥುನ್ ರೈ ಆರೋಪ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಅಶ್ಲೀಲ ವಿಡಿಯೋ ಮೂಲಕ ಬ್ಲಾೃಕ್‌ಮೇಲ್ ಮಾಡುತ್ತಿದ್ದ ಪ್ರಕರಣದ ಆರೋಪಿ ಸಮಿತ್‌ರಾಜ್ ದರೆಗುಡ್ಡೆ ಹಾಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿಕೆ ನೀಡಿರುವ ಶಾಸಕ ಉಮಾನಾಥ ಕೋಟ್ಯಾನ್, ಜೂನ್ 26ರಂದು ಜೈಲಿನಲ್ಲಿ ಆರೋಪಿಯನ್ನು ಭೇಟಿ ಮಾಡಿರುವ ಅರ್ಥವೇನು? ಶಾಸಕರು ತನ್ನ ಆಪ್ತ ಸಮಿತ್‌ರಾಜ್‌ಗೆ ಯಾವ ವಿಚಾರದಲ್ಲಿ ಹೆದರುತ್ತಿದ್ದಾರೆ? ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಕೋಟ್ಯಾನ್ ಒಬ್ಬ ನೈಜ ಕಲಾವಿದ ಎನ್ನುವುದು ಮೊನ್ನೆಯ ಅವರ ಹೇಳಿಕೆಯಿಂದ ಸಾಬೀತಾಗಿದೆ, ನನಗಾಗಲೀ, ಅಭಯರಿಗಾಗಲೀ ಅವರ ಹಾಗೆ ನಟನೆ ಮಾಡಲು ಬರುವುದಿಲ್ಲ. ನಾವು ಏನಿದ್ದರೂ ನೇರವಾಗಿ ಹೇಳಿ ಬಿಡುತ್ತೇವೆ, ಮುಂದಿನ ದಿನಗಳಲ್ಲಿ ಉಮಾನಾಥ ಕೋಟ್ಯಾನ್-ಸಮಿತ್‌ರಾಜ್‌ನ ಎಲ್ಲ ವಿಷಯಗಳನ್ನು ಜನರ ಮುಂದಿಡಲಿದ್ದೇವೆ ಎಂದು ಹೇಳಿದರು.

ನಾನು ಹೆಣ್ಮಕ್ಕಳನ್ನು ಕುಣಿಸಿ ಹಣಮಾಡುತ್ತೇನೆಂದು ಹೇಳಿ ನನ್ನ ತೇಜೋವಧೆ ಮಾಡಿದ್ದಾರೆ. ನಾನು ಪ್ರತಿಷ್ಠಿತ ವೈದ್ಯ ಕುಟುಂಬದಿಂದ ಬಂದವನು. ನನಗೆ ಆ ರೀತಿ ಹಣ ಮಾಡುವ ಅಗತ್ಯ ಇಲ್ಲ. ನನಗೆ ಬಾರ್, ರೆಸ್ಟೋರೆಂಟ್, ಹೋಟೆಲ್ ವ್ಯವಹಾರ ಇರುವುದು ನಿಜ. ಆದರೆ ಹೆಣ್ಮಕ್ಕಳನ್ನು ಕುಣಿಸಿ ವ್ಯವಹಾರ ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ. ನನ್ನ ತೇಜೋವಧೆ ಮಾಡಿದ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.

ಎರಡು ದಿನಗಳಲ್ಲಿ ಎಫ್‌ಐಆರ್: ಎಫ್‌ಎಸ್.ಎಲ್ ವರದಿ ಇನ್ನೆರಡು ದಿನಗಳಲ್ಲೇ ಬರಲಿದೆ. ಸಮಿತ್‌ರಾಜ್ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾಗಲಿವೆ. ಆತನಿಂದ ಅನ್ಯಾಯಕ್ಕೊಳಗಾದವರು ನಮ್ಮನ್ನು ಧೈರ್ಯವಾಗಿ ಸಂಪರ್ಕಿಸಬಹುದು. ನಾವು ಅವರ ಹೆಸರನ್ನು ಗೌಪ್ಯವಾಗಿಟ್ಟು ನ್ಯಾಯ ದೊರಕಿಸಿಕೊಡುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡರಾದ ಪುರಂದರ ದೇವಾಡಿಗ, ರುಕ್ಕಯ್ಯ ಪೂಜಾರಿ, ಸುರೇಶ್ ಕೋಟ್ಯಾನ್, ಹರ್ಷವರ್ಧನ ಪಡಿವಾಳ್, ಪ್ರವೀಣ್ ಕುಮಾರ್, ಜೊಸ್ಸಿ ಮಿನೇಜಸ್, ಚಂದ್ರಹಾಸ ಸನಿಲ್, ರಾಜೇಶ್ ಕಡಲಕೆರೆ, ಸುರೇಶ್ ಪ್ರಭು, ಸತೀಶ್ ಕೋಟ್ಯಾನ್ ಮತ್ತಿತರರಿದ್ದರು.