ಜಿಲ್ಲೆ

ಡಿಕೆಶಿ ಹೇಳಿಕೆಗೆ ಶಾಸಕ ಸುನೀಲ್‌ಕುಮಾರ್ ತರಾಟೆ

ಇಂದಿರಾ ಎನ್ ಕೆ

ಕಾರ್ಕಳ: ಕಾಂಗ್ರೆಸ್‌ನವರ ಗ್ಯಾರಂಟಿಗಾಗಿ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುವ ದಯನೀಯ ಸ್ಥಿತಿ ಮಂಗಳೂರಿನ ಜನರಿಗೆ ಬಂದಿಲ್ಲ. ಗ್ಯಾರಂಟಿ ಘೋಷಣೆಯ ಬಳಿಕವೂ ಉಡುಪಿ-ದಕ್ಷಿಣ ಕನ್ನಡದಲ್ಲಿ ಮಲಗಿರುವ ಕಾಂಗ್ರೆಸನ್ನು ಎಬ್ಬಿಸುವುದಕ್ಕೆ ವಿಶೇಷ ಯೋಜನೆ ರೂಪಿಸಿ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರದ ಆಚೆಗೆ ಬೇರೇನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಹೀಗಾಗಿ ಅನ್ಯ ಜಿಲ್ಲೆಗಳ ಬಗ್ಗೆ ತಾತ್ಸಾರದಿಂದ ಮಾತನಾಡುತ್ತಾರೆ. ಈ ಹಿಂದೆ ಬೆಂಗಳೂರು ನಗರದ ಜನತೆಯ ಬಗ್ಗೆಯೂ ಹೀಗೆ ಮಾತನಾಡಿದ್ದರು. ಮಂಗಳೂರು ಸೇರಿದಂತೆ ಕರಾವಳಿಯ ಜನರು ಸ್ವಾಭಿಮಾನಿಗಳು. ನಿಮ್ಮ ಗ್ಯಾರಂಟಿ ನಂಬಿ ಮತದಾನ ಮಾಡುವಂತಹ ಬೌದ್ಧಿಕ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಹದೆಗೆಡುತ್ತಿದೆ. ಇದಕ್ಕೆ ನಿಮ್ಮ ಓಲೈಕೆ ರಾಜಕಾರಣವೇ ಕಾರಣ. ಇದಕ್ಕಾಗಿಯೇ ಮಂಗಳೂರಿನ ಜನತೆ ನಿಮ್ಮನ್ನು ತಿರಸ್ಕರಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಶಾಸಕ ಸುನೀಲ್‌ಕುಮಾರ್ ಟೀಕಿಸಿದ್ದಾರೆ.