ಜಿಲ್ಲೆ

ಬೆಡ್​ ಬ್ಲಾಕಿಂಗ್​ ದಂಧೆ: ನೂರಾರು ವೆಂಟಿಲೇಟರ್ ಬಂದರೂ ಲೆಕ್ಕಕ್ಕಿಲ್ಲ, ಇದೊಂದು ದೊಡ್ಡ ಅವಾಂತರವೆಂದ ಶಾಸಕ

Mandara

ಬೆಂಗಳೂರು: ಕರೊನಾ ರೋಗಿಗಳ ಬೆಡ್​ ಬ್ಲಾಕಿಂಗ್​ ದಂಧೆ ಬಗ್ಗೆ ವರದಿಗಳು ಹೊರ ಬೀಳುತ್ತಿದ್ದಂತೆಯೇ ಅನೇಕ ರಾಜಕೀಯ ನಾಯಕರು ಕಿಡಿ ಕಾರಲಾರಂಭಿಸಿದ್ದಾರೆ. ಅದೇ ರೀತಿ ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿ ಕೂಡ ಬೇಸರ ಹೊರಹಾಕಿದ್ದಾರೆ.

ನಾನೊಬ್ಬ ಶಾಸಕನಾಗಿ ಬೇಡಿಕೊಂಡರೂ ನನಗೆ ಬೆಡ್​ ಸಿಗುತ್ತಿಲ್ಲ. ಚಾಮರಾಜನಗರದಲ್ಲಿ ಆದ ಪ್ರಕರಣ ನಮ್ಮ ಬೆಂಗಳೂರಿನಲ್ಲಿ ಸಂಭವಿಸಬಾರದು. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ವೆಂಟಿಲೇಟರ್​ ಮತ್ತು ಐಸಿಯು ಬೆಡ್​ ಸಿಗಬೇಕು. ಅಮಿತ್​ ಹೆಸರಿನ ವ್ಯಕ್ತಿ ಬೆಡ್​ ಬ್ಲಾಕ್​ ಮಾಡಿಕೊಳ್ತಾನೆ, ಅದಾದ ಮೇಲೆ ಅದೇ ಬೆಡ್​ನ್ನ ಕರೊನಾ ರೋಗಿಯೊಬ್ಬನಿಗೆ 20 ಸಾವಿರ ರೂಪಾಯಿಗೆ ಬಿಟ್ಟುಕೊಡುತ್ತಾನೆ. ಈಗ ಆತ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ನಗರಕ್ಕೆ 780 ವೆಂಟಿಲೇಟರ್​ ಬಂದು ಒಂದೂವರೆ ತಿಂಗಳಾಗಿದೆ. ಆದರೆ ಅಷ್ಟರಲ್ಲಾಗಲೇ ವೆಂಟಿಲೇಟರ್​ ಇಲ್ಲ ಎನ್ನಲಾಗುತ್ತಿದೆ. ವೆಂಟಿಲೇಟರ್​ ಸಿಗದೆ ಜನ ಸಾವಿಗೀಡಾಗುತ್ತಿದ್ದಾರೆ. ಇದಕ್ಕಿಂತ ದೊಡ್ಡ ಅವಾಂತರ ಬೇರೆ ಇಲ್ಲ. ಬೇಕಿರೋರಿಗೆ ಬೆಡ್​ ಕೊಡೋ ದಂಧೆ ನಡೀತಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಅವರು ತಿಳಿಸಿದ್ದಾರೆ.