ಜಿಲ್ಲೆ

ಇದು ನನ್ನ ಕೊನೆಯ ಇಲೆಕ್ಷನ್‌-ದಿನಕರ ಶೆಟ್ಟಿ

ಸುಭಾಸ ಹೆಗಡೆ ಧೂಪದಹೊಂಡ

ಗೋಕರ್ಣ:ಇದು ನನ್ನ ಕೊನೆಯ ಇಲೆಕ್ಷನ್‌,ಹಾಗೆಂದು ನಾನು ಮುಂದಿನ ಚುನಾವಣೆಯಲ್ಲಿ ಪಕ್ಷ ನೀಡಿದ ಕೆಲಸ ಮಾಡಿಕೊಂಡು ಇರುತ್ತೇನೆ. ಈಗ ನನ್ನನ್ನು ಬೆಂಬಲಿಸಿ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದರು.

ತೊರ್ಕೆ ನಾಡವರ ಸಭಾಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.

‌ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯ ಮಾಡುವ ಜತೆಗೆ ಯಾರಿಗೂ ಉಪದ್ರವ ಕೊಡದೇ ನನ್ನ ಶತ್ರುಗಳಿಗೂ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದೇನೆ ಎಂದರು.

ಕಳೆದ ಚುನಾವಣೆಯಲ್ಲಿ ನನ್ನ ನಿರೀಕ್ಷೆಗೂ ಮೀರಿ 33 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಅಂದಿನಿಂದಲೇ ನಿಮ್ಮ ಋಣ ತೀರಿಸಬೇಕು ಎಂದು ಕಾರ್ಯ ಪ್ರವೃತ್ತನಾದೆ.

ಶಕ್ತಿ ಮೀರಿ ಕಾರ್ಯ ನಿರ್ವಹಿಸಿದ್ದೇನೆ. ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ‌1800 ಕೋಟಿ ರೂ. ಅನುದಾನವನ್ನು ತಂದಿದ್ದೇನೆ.ಹಿರೇಗುತ್ತಿಯಲ್ಲಿ ಕಾಲೇಜ್, ಕುಮಟಾದಲ್ಲಿ ಪದವಿ ಕಾಲೇಜ್,  ಮಿನಿ ವಿಧಾನಸೌಧ, ಹೊನ್ನಾವರದಲ್ಲಿ ಬಸ್ ನಿಲ್ದಾಣ, ಫುಟ್ ಬ್ರಿಜ್, ಪ್ರತಿ ಗ್ರಾಮಕ್ಕೆ ರಸ್ತೆ ಹೀಗೆ ಹಲವು ಅಭಿವೃದ್ಧಿ ಕಾರ್ಯ  ಕೈಗೊಂಡಿದ್ದೇನೆ.ಮುಂದೆ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಯೋಜಿಸಿದ್ದೇನೆ ಎಂದರು.
ಮುಖಂಡ ನಾಗರಾಜ ನಾಯಕ ತೊರ್ಕೆ ಮಾತನಾಡಿ, ದಿನಕರ ಶೆಟ್ಟಿ ಅವರು ನಮ್ಮೂರ ಗ್ರಾಪಂ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಖಾರ್ಲ್ಯಾಂಡ್ ಒಡ್ಡು ನಿರ್ಮಿಸಿ ಜಮೀನುಗಳಿಗೆ ಉಪ್ಪು ನೀರು ನುಗ್ಗುವುದನ್ನು ತಡೆಯಲು ಕಾರಣೀಭೂತರಾಗಿದ್ದಾರೆ ಎಂದರು.


ಕುಮಟಾ ಮಂಡಲ ಅಧ್ಯಕ್ಷ ಹೇಮಂತಕುಮಾರ ಗಾಂವಕರ್, ಎಂ.ಜಿ.ಭಟ್,  ಮಂಜುನಾಥ ನಾಯ್ಕ, ಆನಂದು ಕವರಿ,  ವಿನಾಯಕ ಭಟ್,  ಭಾರತಿ ಗೌಡ, ಮೋಹನ ನಾಯ್ಕ, ಮಹೇಶ ಶೆಟ್ಟಿ, ಸಣ್ಣು ಗೌಡ, ಲಕ್ಷ್ಮೀ ಗೌಡ ಇದ್ದರು. ಈಶ್ವರ ಹರಿಕಂತ್ರ ಹಾಗೂ ಇತರರು ಇತರರು ಪಕ್ಷ ಸೇರ್ಪಡೆಯಾದರು.


ಮೋದಿ ಕಣ್ಣಾರೆ ನೋಡುವ ಭಾಗ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರಂದು ಪ್ರಚಾರಕ್ಕಾಗಿ ಅಂಕೋಲಾ‌ ಬೇಲೆಕೇರಿಗೆ ಬರಲಿದ್ದಾರೆ. ಮಹಾ ಪುರುಷನನ್ನು ಕಣ್ಣಾರೆ ನೋಡುವ ಭಾಗ್ಯ ಸಿಗಲಿದೆ. ಎಲ್ಲರೂ ಆಗಮಿಸಬೇಕು. ಪ್ರಧಾನಿ ಮೋದಿ ಅವರು ಪ್ರತಿ ರೈತನ ಖಾತೆಗೆ ನೇರವಾಗಿ ಕಿಸಾನ್ ಸಮ್ಮಾನ ನಿಧಿ ಪಾವತಿ ಮಾಡುತ್ತಿದ್ದಾರೆ. ಕರೊನಾ  ಕಷ್ಟ ಕಾಲದಲ್ಲೂ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಇದ್ದರೆ ಅಲ್ಪಸಂಖ್ಯಾತರಿಗೆ ಮಾತ್ರ ಸೌಲಭ್ಯ ಸಿಗುತ್ತಿದ್ದರು ಎಂದು ದಿನಕರ ಶೆಟ್ಟಿ ಹೇಳಿದರು.

ಕರೋನಾ ಬಂದಾಗ ನಮ್ಮ ಊರು ಎಂದು ತಿರುಗಾಡಿದೆ ಕೈಲಾದ ನೆರವು ಮಾಡಿದ್ದೇನೆ. ಕ್ರಿಕೆಟ್ ಮ್ಯಾಚ್  ಮಾಡಿದಾಗ, ಯಕ್ಷಗಾನ ಮಾಡಿದಾಗ ಸಹಾಯ ಮಾಡಿದ್ದೇನೆ. ಆಗೆಲ್ಲೂ ಇಲ್ಲದ ಕಾಂಗ್ರೆಸ್‌  ಅಭ್ಯರ್ಥಿ ಈಗ  ಹೊರಗಿನಿಂದ ದುಡ್ಡಿನ‌ ಚೀಲ ಹಿಡಿದು ಬಂದಿದ್ದಾರೆ. ನಮ್ಮ ಕ್ಷೇತ್ರದ ಜನ ಸ್ವಾಭಿಮಾನಿಗಳು ಹಣಕ್ಕೆ ಮರುಳಾಗುವುದಿಲ್ಲ ಎಂಬ ವಿಶ್ವಾಸವಿದೆ.ದಿನಕರ ಶೆಟ್ಟಿಕುಮಟಾ ಶಾಸಕ....