ಜಿಲ್ಲೆ

ಮಂಗಳೂರಿನ ಆಸ್ಪತ್ರೆಯಿಂದ ಶವ ತರಲು ನೆರವಾದ ಶಾಸಕ ಭೀಮಣ್ಣ

ಶಿರಸಿ: ಮೃತ ಮಗನ ಶವವನ್ನು ತರಲಾಗದ ದುಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಶಾಸಕ ಭೀಮಣ್ಣ ನಾಯ್ಕ ನೆರವಾಗಿದ್ದಾರೆ.

ಸ್ವತಃ ಖರ್ಚು ಭರಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಊರಿಗೆ ಮೃತ ಶರೀರವನ್ನು ತರಿಸಲು ವ್ಯವಸ್ಥೆ ಮಾಡಿ ಮಾನವೀಯತೆ ತೋರಿದ್ದಾರೆ. ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಿರಸಿ ತಾಲೂಕಿನ ಗೋಳಿ ಸಮೀಪದ ಅಮ್ಮಚ್ಚಿಯ ಗಣೇಶ ಗಣಪ ಗೌಡ (20) ಚಿಕಿತ್ಸೆಗೆ ಸ್ಪಂದಿಸದೇ ಕಳೆದ ವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಅವರಿವರ ಬಳಿ ಸಾಲ ಬೇಡಿ ಲಕ್ಷಾಂತರ ರೂ. ಆಸ್ಪತ್ರೆ ಬಿಲ್ ಕಟ್ಟಿದ್ದ ಕುಟುಂಬ ಈಗ ಶವ ಕೊಂಡೊಯ್ಯಲು ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದೇ ಪರಿತಪಿಸುತ್ತಿತ್ತು. 12 ಸಾವಿರ ರೂ.ಗಳನ್ನು ಆಂಬುಲೆನ್ಸ್ನವರು ಕೇಳುತ್ತಿದ್ದರು.

ಈ ವಿಷಯವನ್ನು ಬೇರೆಯವರಿಂದ ಮಾಹಿತಿ ಪಡೆದ ಶಾಸಕ ಭೀಮಣ್ಣ ನಾಯ್ಕರ ಆಪ್ತ ಕಾರ್ಯದರ್ಶಿ ವಿಷಯವನ್ನು ಖಚಿತ ಮಾಡಿಕೊಂಡಿದ್ದಾರೆ.

ನಂತರ ಭೀಮಣ್ಣ ನಾಯ್ಕರು ತಕ್ಷಣ ಸ್ಪಂದನೆಗೆ ಸೂಚಿಸಿದ್ದು, ಅದರಂತೆ, ಮುಂದಿನ ಅರ್ಧ ಗಂಟೆಯಲ್ಲಿ ಆಂಬುಲೆನ್ಸ್ ಕಳಿಸಿ ಮೃತರ ಶವ ಹಾಗೂ ಅವರ ಚಿಕಿತ್ಸೆಗಾಗಿ ಉಳಿದುಕೊಂಡಿದ್ದ ಎಲ್ಲರನ್ನೂ ಆಂಬುಲೆನ್ಸ್ನಲ್ಲೇ ಊರಿಗೆ ಕರೆಸಿಕೊಂಡಿದ್ದಾರೆ. ಆಂಬುಲೆನ್ಸ್ನ ಖರ್ಚನ್ನು ಅವರೇ ಶಾಸಕರೇ ನೀಡಿದ್ದಾರೆ ಎಂದು ಮನೆಯವರು ಖಚಿತ ಮಾಡಿದ್ದಾರೆ.