ಬೆಂಗಳೂರು: ಕರೊನಾ ಭೀತಿ ಮಧ್ಯೆ ರಾಜ್ಯದ ಕೆಲವೆಡೆ ಕಿಡಿಗೇಡಿಗಳು ಹಬ್ಬಿಸಿದ್ದ ವದಂತಿಗಳು ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೆ ಈಡುಮಾಡಿದ್ದವು. ಕೊನೆಗೂ ವದಂತಿಯ ಅಸಲಿಯತ್ತು ಬಯಲಾದ್ದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಂದಾದೀಪ ಆರಿದೆ, ಎಲ್ಲರೂ ತಮ್ಮ ಮನೆಗಳ ಮುಂದೆ ದೀಪ ಹಚ್ಚಬೇಕೆಂದು ಗುರುವಾರ ರಾತ್ರಿ ಫೇಸ್ಬುಕ್ನಲ್ಲಿ ಶೇರ್ ಆಗಿದ್ದ ವದಂತಿ ನಂಬಿದ ದಾವಣಗೆರೆ, ಚಿತ್ರದುರ್ಗ ಇತರ ಜಿಲ್ಲೆಗಳ ಜನರು ಜಾಗರಣೆ ಮಾಡಿದರು. ಶುಕ್ರವಾರ ನಸುಕಿನಲ್ಲೇ ಮನೆ ಎದುರು ರಂಗೋಲಿ ಹಾಕಿ ನಂದಾದೀಪ ಬೆಳಗಿದ್ದರು. ಈ ವದಂತಿ ಹಬ್ಬಿಸಿದ್ದ ಹೊನ್ನಾಳಿ ತಾಲೂಕು ಸುಂಕದಕಟ್ಟೆಯ ಮಧು, ಸಾಮಾಜಿಕ ಜಾಲತಾಣದಲ್ಲೇ ತಪ್ಪೊಪ್ಪಿಕೊಂಡಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕ್ಷಮೆ ಯಾಚಿಸಿದ್ದಾನೆ. ಅರ್ಚಕನಾಗಿದ್ದ ಮಧು ಕ್ಷಮೆ ಕೇಳಿರುವುದರಿಂದ ದೂರು ಸಲ್ಲಿಸದಿರಲು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ನಿರ್ಧರಿಸಿದ್ದಾರೆ. ಶ್ರೀಕ್ಷೇತ್ರದಲ್ಲಿ ನಂದಾದೀಪ ಆರಿ ಹೋಗಿದೆ ಎಂಬ ವದಂತಿಗೆ ಕಿವಿಗೊಡಬೇಡಿ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಹಿಂದುಪುರದಲ್ಲಿ ಗಂಡಸಿಗೆ ಹೆಣ್ಣು ಮಗು ಹುಟ್ಟಿದ್ದು, ಅದು ಹಂದಿ ಮತ್ತು ಮನುಷ್ಯನನ್ನು ಹೋಲುತ್ತಿದೆ. ಇದು ಕೇಡುಗಾಲದ ಸಂದೇಶ. ಆದ್ದರಿಂದ ಯಾರೂ ನಿದ್ರಿಸದೆ ಎಚ್ಚರಿಕೆಯಿಂದ ಇರಬೇಕು. ಜತೆಗೆ ಇತರರನ್ನೂ ಜಾಗರಣೆ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಕರೊನಾ ಸೋಂಕಿನ ಸಾವುಗಳು ಹೆಚ್ಚಾಗುತ್ತವೆ ಎಂಬ ಸಂದೇಶ ವಾಟ್ಸ್ಆಪ್ ಮೂಲಕ ಗುರುವಾರ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹರಿದಾಡಿತ್ತು. ಹೀಗಾಗಿ ಜಿಲ್ಲೆಯ ವಿವಿಧೆಡೆ ಜನರು ಇಡೀ ರಾತ್ರಿ ಜಾಗರಣೆ ಇದ್ದಿದ್ದಲ್ಲದೆ, ನಿದ್ರಿಸುತ್ತಿದ್ದ ಕಂದಮ್ಮಗಳನ್ನು ಬಡಿದೆಬ್ಬಿಸಿದ್ದಾರೆ. ಒಬ್ಬನೇ ಮಗನಿರುವ ತಂದೆ ರಾತ್ರಿ 2ರ ವೇಳೆಗೆ ಸ್ನಾನ ಮಾಡಿ, ಸಮೀಪದ ತೆಂಗಿನ ಮರಕ್ಕೆ ಪೂಜೆ ಸಲ್ಲಿಸಬೇಕು. ಸ್ನಾನದ ನೀರನ್ನು ಒಬ್ಬನೇ ಮಗನಿರುವ ಇನ್ನೊಂದು ಮನೆಯಿಂದಲೇ ತರಬೇಕು. ಇಲ್ಲದಿದ್ದಲ್ಲಿ ಇರುವ ಒಬ್ಬ ಮಗನನ್ನು ಕರೊನಾ ಸೋಂಕಿನಿಂದ ಕಳೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶ ಕೂಡ ಹರಿದಾಡಿದೆ. ಇಂಥ ಸಂದೇಶ ಕಳಿಸಿದವರ ಬಗ್ಗೆ ಜನರು ಮಾಹಿತಿ ನೀಡಬೇಕು. ನಿರ್ದಾಕ್ಷಿಣ್ಯವಾಗಿ ಪುಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಬೆಂಗ