ಜಿಲ್ಲೆ

ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಹಿತಕರ ಘಟನೆ; Mysore ಅಲ್ಲಿ ಕರುವಿನ ಬಾಲ ಕತ್ತರಿಸಿ ವಿಕೃತಿ

ಮೈಸೂರು: ಚಾಮರಾಜಪೇಟೆಯಲ್ಲಿ ದುಷ್ಕರ್ಮಿಯೋರ್ವ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆಯೊಂದು ಮೈಸೂರಿನಲ್ಲಿ ?(Mysore) ನಡೆದಿದ್ದು, ಮತ್ತೊಂದು ಸುತ್ತಿನ ಸಂಘರ್ಷಕ್ಕೆ ನಾಂದಿ ಹಾಡಿದೆ.

ಮೈಸೂರು (Mysore) ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ನಂಜನಗೂಡಿನಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಕರುವಿನ ಬಾಲವನ್ನು ಕತ್ತರಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ದೇವರಿಗೆ ಬಿಟ್ಟ ಕರುವಿನ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಮಚ್ಚಿನಿಂದಲೂ ಹಲ್ಲೆ ನಡೆಸಿದ್ದಾರೆ.

ನಂಜನಗೂಡು ದೇವಾಲಯದಲ್ಲಿ ಸಾಮಾನ್ಯವಾಗಿ ಭಕ್ತಾಧಿಗಳು ಹಸುಗಳನ್ನು ಹರಕೆಯ ರೂಪದಲ್ಲಿ ಕೊಡುತ್ತಾರೆ. ಅದೇ ರೀತಿ ಭಕ್ತರೊಬ್ಬರು ದೇವಲಾಯಕ್ಕೆ ಕರುವನ್ನು ನೀಡುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದರು. ಪರಶುರಾಮನ ದೇಗುಲದ ಬಳಿ ಇದ್ದ ಕರುವಿನ ಮೇಲೆ ಯಾರೋ ಕಿಡಿಗೇಡಿಗಳು ದಾಳಿ ಮಾಡಿದ್ದು, ಮಚ್ಚಿನಿಂದ ಅದರ ಮೇಲೆ ಹಲ್ಲೆ ನಡೆಸಿ ಬಾಲವನ್ನು ತುಂಡರಿಸಿದ್ದಾರೆ.

ನೋವಿನಿಂದ ಬಳಲುತ್ತಿದ್ದ ಕರುವನ್ನು ಗಮನಿಸಿದ ಸ್ಥಳೀಯರು ಕೂಡಲೇ ಅದಕ್ಕೆ ಚಿಕಿತ್ಸೆಯನ್ನು ಕೊಡಿಸಿದ್ದು, ಸದ್ಯ ಕರುವಿನ ಆರೈಕೆ ಮಾಡಲಾಗುತ್ತಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್​ ಸಿಂಹ, ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆ ಮಾಸುವ ಮುನ್ನವೇ ನಂಜನಗೂಡಿನಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಧಾನವಾಗಿ ನೀಡಿದ್ದ ಹಸುವಿನಮೇಲೆ ಕಿಡಿಗೇಡಿಗಳು ಮಾರಕಾಸ್ತ್ರದಿಂದ ದಾಳಿ ಮಾಡಿರುವುದು ಖಂಡನೀಯ.ರಾಜ್ಯ ಸರ್ಕಾರವು ತಕ್ಷಣವೇ ಕಿಡಿಗೇಡಿಗಳನ್ನು ಬಂಧಿಸಿ,ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.