ಜಿಲ್ಲೆ

ಕಾಲೇಜಿನಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತ ವಯಸ್ಕಳು; ತಂದೆಗಾಗಿ ಪೊಲೀಸರ ತೀವ್ರ ಶೋಧ

ಕೋಲಾರ: ಈಗಷ್ಟೇ ಶಾಲೆ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿರುವ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯೋರ್ವಳು ಕಾಲೇಜು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕಾಲೇಜು ವಿದ್ಯಾರ್ಥಿ, ಸಿಬ್ಬಂದಿ ವರ್ಗ ಅಚ್ಚರಿಗೊಂಡಿದ್ದು, ಪೊಲೀಸರು ಘಟನೆಗೆ ಕಾರಣನಾದ ಭೂಪನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಕೋಲಾರದ ಹೊರವಲಯದಲ್ಲಿರುವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ್ದಾಳೆ. ಬಳಿಕ ಹೆರಿಗೆ ನೋವು ತಾಳಲಾರದೆ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಕಾಲೇಜಿನ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಾಲಕಿಯ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಆದರೆ, ಆತ ಯಾರು ಏನು ಎಂಬ ವಿಚಾರ ತಿಳಿದು ಬಂದಿಲ್ಲ. ಬಾಲಕಿಯ ತಲೆಕೆಡಿಸಿ ಆಕೆಯನ್ನು ಗರ್ಭಿಣಿ ಮಾಡಿದವನಿಗಾಗಿ ಹುಡುಕಾಟ ನಡೆಯುತ್ತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು.

ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯಾರ್ಥಿನಿಗೆ ತಾನು ಗರ್ಭಿಣಿ ಎನ್ನುವುದು ಗೊತ್ತೇ ಇರಲಿಲ್ವಾ ಅಥವಾ ಮನೆಯಲ್ಲಿ ಪೋಷಕರು, ಸ್ನೇಹಿತರಿಗೆ ವಿಚಾರ ಗೊತ್ತಿದ್ರು ಮುಚ್ಚಿಟ್ರಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.