ಜಿಲ್ಲೆ

ಅಕ್ಟೋಬರ್ 5ರಂದು ಮೂವರು ಎಂಎಲ್​ಸಿಗಳಿಗೆ ಸಚಿವ ಸ್ಥಾನ ಪ್ರಶ್ನಿಸಿದ ಪಿಐಎಲ್ ವಿಚಾರಣೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ವಿಧಾನ ಪರಿಷತ್​ಗೆ ಇತ್ತೀಚೆಗೆ ಆಯ್ಕೆಯಾಗಿರುವ ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಆರ್. ಶಂಕರ್​ಗೆ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಅ.5ರಂದು ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.

ಬೆಂಗಳೂರಿನ ವಕೀಲ ಎ.ಎಸ್. ಹರೀಶ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಪ್ರತಿವಾದಿಗಳಾದ ವಿಧಾನಪರಿಷತ್ ಸದಸ್ಯರ ಪರ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಅರ್ಜಿದಾರರ ಪರ ಹಾಜರಿದ್ದ ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಶೀಘ್ರ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಅರ್ಜಿಯಲ್ಲಿನ ಮೂವರು ಪ್ರತಿವಾದಿಗಳನ್ನು ವಿಧಾನಪರಿಷತ್​ಗೆ ನಾಮನಿರ್ದೇಶನ ಮಾಡಿರುವ ಕ್ರಮ ಪ್ರಶ್ನಿಸಿ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದು, ಆ ಅರ್ಜಿಯು ಅ.5ಕ್ಕೆ ವಿಚಾರಣೆಗೆ ಬರಲಿದೆ. ಆ ದಿನವೇ ಈ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿ, ಅ.5ಕ್ಕೆ ವಿಚಾರಣೆ ನಿಗದಿಪಡಿಸಿತು.