ನಾಗಠಾಣ ವಿಧಾನ ಸಭೆ ಕ್ಷೇತ್ರದಲ್ಲಿ ಸಚಿವ ಎಂ.ಬಿ. ಪಾಟೀಲ ಬರ ಪರಿಶೀಲನೆ ನಡೆಸಿದರು.  
ಜಿಲ್ಲೆ

ಸಚಿವ ಎಂ.ಬಿ. ಪಾಟೀಲರಿಂದ ಬರ ಪರಿಶೀಲನೆ, ರೈತರಿಗೆ ತ್ವರಿತವಾಗಿ ಪರಿಹಾರ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ

ವಿಜಯಪುರ: ರಾಜ್ಯದಲ್ಲಿ ಆವರಿಸಿರುವ ತೀವ್ರ ಬರ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ತ್ವರಿತವಾಗಿ ಬರ ಪರಿಹಾರ ಹಣ ಬಿಡುಗಡೆಗೊಳಿಸಬೇಕೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಒತ್ತಾಯಿಸಿದರು.

ಬರ ನಿರ್ವಹಣೆಯಲ್ಲಿ ರಾಜ್ಯಕ್ಕಿಂತ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ರಾಜ್ಯದಲ್ಲಿ 27 ಸಂಸದರಿದ್ದಾರೆ. ಇವರು ಯಾರೂ ಕೂಡ ಬರದ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ಸಚಿವರನ್ನು ಭೇಟಿ ಮಾಡುತ್ತಿಲ್ಲ. ಪ್ರಧಾನ ಮಂತ್ರಿಗಳು ಇವರಿಗೆ ಸಮಯವೂ ಕೊಡುತ್ತಿಲ್ಲ. ಬರ ನಿರ್ವಹಣೆ ಎಲ್ಲರ ಜವಾಬ್ದಾರಿ. ರೈತರ ನೆರವಿಗೆ ತ್ವರಿತವಾಗಿ ಧಾವಿಸಬೇಕು. ಈವರೆಗೂ ಪರಿಹಾರ ಬಂದಿಲ್ಲ. ವರದಿ ಕೊಟ್ಟಿದ್ದಾರೋ ಇಲ್ಲ ಗೊತ್ತಿಲ್ಲ. ಈ ಬಗ್ಗೆ ಗಮನ ಸೆಳೆದು ಪರಿಹಾರ ತರುವ ಕೆಲಸ ಸಂಸದರು ಮಾಡಬೇಕಿದೆ ಎಂದರು.

ಈಗಾಗಲೇ ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ವರದಿ ತೆಗೆದುಕೊಂಡು ಹೋಗಿದೆ. ನಾವೇನೋ ಮಾಹಿತಿ ನೀಡಿಲ್ಲ. ಕನಿಷ್ಟ ಪಕ್ಷ ತಮ್ಮದೇ ಅಧಿಕಾರಿಗಳ ತಂಡದ ವರದಿ ಆಧರಿಸಿ ಪರಿಹಾರ ಕಲ್ಪಿಸಿ ಎಂದು ಬುಧವಾರ ಬರ ಪರಿಶೀಲನೆ ವೇಳೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಎನ್‌ಡಿಆರ್‌ಎಫ್ ನಿಯಮ ಬದಲಾಗಲಿ

ಕೇಂದ್ರದ ಎನ್‌ಡಿಆರ್‌ಎಫ್ ನಿಯಮಾವಳಿ ಕೂಡ ಬದಲಾಗುವ ಅವಶ್ಯಕತೆ ಇದೆ. ಸೂರ್ಯಪಾನಕ್ಕೆ ಪ್ರತಿ ಎಕರೆಗೆ ರೈತರು ಹತ್ತು ಸಾವಿರ ಖರ್ಚು ಮಾಡಿದ್ದಾರೆ. ಆದರೆ ಮೂರವರೆ ಸಾವಿರ ರೂಪಾಯಿ ಮಾತ್ರ ಪರಿಹಾರ ಸಿಗಲಿದೆ. ಲಿಂಬೆ ಬೆಳೆಗಾರರ ಸ್ಥಿತಿ ಕೂಡ ಹಾಗೇ ಇದೆ. ಸುಮಾರು 10 ಸಾವಿರ ಹೆಕ್ಟೇರ್ ಲಿಂಬೆ ಪ್ರದೇಶವಿದೆ. ಸುಮಾರು 7.5 ಕೋಟಿ ಹೆಕ್ಟೇರ್ ಲಿಂಬೆ ಹಾನಿಯಾಗಿದೆ. ತೊಗರಿ ಬೆಳೆಗಾರರ ಸ್ಥಿತಿಯೂ ಭಿನ್ನವಾಗಿಲ್ಲ. ಮೂರು ಲಕ್ಷ ಎಕರೆ ತೊಗರಿ ನಾಶವಾಗಿದೆ. ಈಗಾಗಲೇ ಜಿಲ್ಲಾಡಳಿತ ವರದಿ ಕೂಡ ಒಪ್ಪಿಸಿದೆ. ಆ ಪ್ರಕಾರ ಕೇಂದ್ರದ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು ಎಂದರು.

ಉದ್ಯೋಗ ಖಾತ್ರಿ

ಬರ ಹಿನ್ನೆಲೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ. ಸರ್ಕಾರ ಕ್ಯಾಬಿನೆಟ್‌ನಲ್ಲೂ ನಿರ್ಧಾರ ಮಾಡಿದ್ದು ಉದ್ಯೋಗ ಖಾತ್ರಿ ಮಾನವ ದಿನಗಳ ಸೃಜನೆಗೆ ಯಾವುದೇ ಲಿಮಿಟ್ ನೀಡಿಲ್ಲ. ಎಷ್ಟು ಜನ ಬಂದರೂ ಕೆಲಸ ನೀಡಬೇಕೆಂದು ತಿಳಿಸಲಾಗಿದೆ ಎಂದರು.
ಇಡೀ ರಾಜ್ಯ ತೀವ್ರ ಬರದಿಂದ ತತ್ತರಿಸಿದೆ. ಈಗಾಗಲೇ ಸರ್ಕಾರ ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆ ಪ್ರಕಾರ ಸರ್ಕಾರ ಕುಡಿಯುವ ಎಲ್ಲ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಹಣ ಇರಿಸಲಾಗಿದೆ. ಇನ್ನೂ ಹೆಚ್ಚಿನ ಹಣ ಬೇಕಾದರೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನೂರು ಕೋಟಿವರೆಗೆ ಹಣ ನೀಡಲು ಸಿದ್ದ ಇರುವುದಾಗಿ ತಿಳಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸೂಚಿಸಿದೆ. ಬಹುತೇಕ ಇಲಾಖೆಗಳು ಬರ ಮಾಹಿತಿ ನೀಡಿವೆ ಎಂದರು.

ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಾಹುಲ್ ಶಿಂಧೆ ಮತ್ತಿತರರಿದ್ದರು. ಇಂಡಿ, ನಾಗಠಾಣ, ದೇವರಹಿಪ್ಪರಗಿ ಮತ್ತಿತರ ಕ್ಷೇತ್ರಗಳಲ್ಲಿ ಸಚಿವರು ಬರ ಪರಿಶೀಲನೆ ನಡೆಸಿದರು.