ಜಿಲ್ಲೆ

ತ್ಯಾಜ್ಯ ನಿರ್ವಹಣೆಗೆ ಮಿನಿ ಎಂಆರ್‌ಎಫ್ ಘಟಕ : 34ನೇ ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ ತಾಪಂಗೆ ಬರೆಯಲು ನಿರ್ಣಯ

ಸೌಮ್ಯ ಆರ್

ಉಪ್ಪಿನಂಗಡಿ: ದ್ರವ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಲು ಗ್ರಾಮಕ್ಕೆ ಮಿನಿ ಎಂಆರ್‌ಎಫ್ ಘಟಕಕ್ಕೆ ಅನುಮೋದನೆ ಕೊಡುವಂತೆ ಆಗ್ರಹಿಸಿ ತಾಲೂಕು ಪಂಚಾಯಿತಿಗೆ ಬರೆದುಕೊಳ್ಳಲು 34ನೇ ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ಸುಜಾತ ರೈ ಅಧ್ಯಕ್ಷತೆಯಲ್ಲಿ ಜರುಗಿತು. ಪಿಡಿಒ ಈ ಹಿಂದೆ ನಡೆದ ಸಭೆಯ ನಿರ್ಣಯ ಹಾಗೂ ಲೆಕ್ಕಪತ್ರ ಓದಿ ಮಂಜೂರಾತಿ ಪಡೆದರು. ಬಳಿಕ ಮಾತನಾಡಿದ ಉಪಾಧ್ಯಕ್ಷ ಹರೀಶ ಡಿ, ತಾಲೂಕಿನಲ್ಲಿ 60 ಗ್ರಾಮಗಳಿಗೆ ಕೆದಂಬಾಡಿಯಲ್ಲಿ ಒಂದು ಎಂಆರ್‌ಎಫ್ ಘಟಕ ತೆರೆದಿದ್ದು, ಅಲ್ಲಿ ನಮ್ಮ ಗ್ರಾಮಕ್ಕೆ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ. ಅದಕ್ಕಾಗಿ ಗ್ರಾಮದಲ್ಲಿ ಮಿನಿ ಎಂಆರ್‌ಎಫ್ ಘಟಕಕ್ಕೆ ಅವಕಾಶ ಮಾಡಿಕೊಡಬೇಕು. ಗ್ರಾಮಕ್ಕೆ ಗ್ರಾಮದ ಗಡಿಯಲ್ಲಿ ಒಂದು ಎಕರೆ 26 ಸೆಂಟ್ಸ್ ಜಾಗ ಸರ್ಕಾರ ತ್ಯಾಜ್ಯ ನಿರ್ವಹಣೆಗೆ ಮಂಜೂರುಗೊಳಿಸಿದೆ. ಅದರ ಪಕ್ಕದಲ್ಲೇ ರುದ್ರಭೂಮಿಗೆ ಒಂದು ಎಕರೆ ಜಾಗ ಮಂಜೂರುಗೊಳಿಸಿದೆ. ಇಲ್ಲಿ ಶೀಘ್ರ ಗಡಿ ಗುರುತು ಕಾರ್ಯ ನಡೆಸಿ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸದಸ್ಯ ವಿಜಯ ಕುಮಾರ್, ದರ್ಬೆ-ಮೈಂದಡ್ಕ ಕಾಂಕ್ರಿಟೀಕರಣ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಕಳಪೆಯಾಗಿ ನಿರ್ವಹಿಸಿದ್ದಾರೆಂದು ಆರೋಪ ಇದೆ. ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಬಿರುಕು ಕಂಡಿದ್ದು 5 ವರ್ಷಗಳ ಗ್ಯಾರಂಟಿ ನೀಡಿದರೆ ಮಾತ್ರ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಿ ಎಂದರು.

ಗ್ರಾಮದಲ್ಲಿನ ಎಲ್ಲ ವ್ಯಾಪಾರಸ್ಥರು ಪಂಚಾಯಿತಿ ಪರವಾನಗಿ ಪಡೆದೆ ವ್ಯಾಪಾರ ನಡೆಸುವಂತೆ, ತಪ್ಪಿದ್ದಲ್ಲಿ ದಂಡ ವಿಧಿಸಬೇಕೆಂದು ಒತ್ತಾಯ, ಪುತ್ತೂರು ಉಪ್ಪಿನಂಗಡಿ ನಡುವಣ ರಸ್ತೆ ಅಗಲೀಕರಣ ವೇಳೆ ಅಂಬೆಳದಲ್ಲಿ ಕೆಡವಿದ ಪ್ರಯಾಣಿಕರ ತಂಗುದಾಣ ಮರುಸ್ಥಾಪಿಸಲು ಅವಕಾಶ ಕಲ್ಪಿಸಬೇಕೆಂಬ ಮನವಿ ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಿತು. ಸದಸ್ಯರಾದ ಗೀತಾ, ತುಳಸಿ, ವೇದಾವತಿ, ರಮೇಶ ಮತ್ತಿತರರು ಉಪಸ್ಥಿತರಿದ್ದರು.