ಜಿಲ್ಲೆ

ಪಡಿತರ ವ್ಯವಸ್ಥೆಯಡಿ ಸಿರಿಧಾನ್ಯ ವಿತರಣೆ

arunakunigal

ಎನ್​ಎಚ್​ಆರ್​ಸಿ ತಜ್ಞರ ಸಮಿತಿ ಶಿಫಾರಸು | ಕರೊನಾ ಪರಿಣಾಮಗಳ ಕುರಿತು ಅಧ್ಯಯನ

ಶಿಫಾರಸುಗಳ ಪ್ರಮುಖಾಂಶಗಳು -ಆರೋಗ್ಯ ಸೇವೆಗಳ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು. ಪೂರಕ ಕಬ್ಬಿಣಾಂಶ, ಪೌಷ್ಟಿಕ ಆಹಾರ ಕಟ್ಟುನಿಟ್ಟಾಗಿ ಪೂರೈಕೆ. -ಲೈಂಗಿಕ ದೌರ್ಜನ್ಯದಿಂದ ನೊಂದ ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸೇವೆ ಉಚಿತ, ಪೋಸ್ಕೋ ಸೇರಿ ಕಾಯ್ದೆರೀತ್ಯ ತುರ್ತು ಕ್ರಮ. -ಕರೊನಾ ಸೋಂಕು ದೃಢಪಟ್ಟ ಪ್ರಕರಣಗಳು, ಚೇತರಿಕೆ ಹಾಗೂ ಸೋಂಕಿನಿಂದ ಮೃತಪಟ್ಟ ಮಕ್ಕಳ ಬಗ್ಗೆ ಅಧಿಕೃತ ಮತ್ತು ನಿಖರ ದತ್ತಾಂಶ ಸಂಗ್ರಹ. -2011ರ ನಂತರ ಜನಿಸಿದ ಮಕ್ಕಳ ಹೆಸರು ಪಡಿತರ ಚೀಟಿಯಲ್ಲಿ ಸೇರ್ಪಡೆ - ಪಡಿತರ ವ್ಯವಸ್ಥೆಯಿಂದ ಹೊರಗಿರುವವರಿಗೆ ಸಮುದಾಯ ಅಡುಗೆ ಕೇಂದ್ರ -ಅಂಗನವಾಡಿಯಲ್ಲಿ ನೋಂದಾಯಿಸಿಕೊಂಡ 3 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರ ಮನೆಗೆ ಆಹಾರ ಧಾನ್ಯ ಪೂರೈಕೆ -ಶಾಲೆಯಿಂದ ಮಕ್ಕಳು ಹೊರಗುಳಿಯುವುದನ್ನು ತಪ್ಪಿಸಲು ಬಿಸಿಯೂಟ ಪುನರಾರಂಭ ಇಲ್ಲವೇ ಪ್ರತಿ ಮಗುವಿಗೆ ಆಹಾರಧಾನ್ಯ ಸರಬರಾಜು -ಶಾಲಾ ಮಕ್ಕಳನ್ನು ಸಣ್ಣ ಗುಂಪುಗಳಾಗಿ ವಿಂಗಡಿಸಿ ಬಹುಮಾಧ್ಯಮದ ಮೂಲಕ ಶಿಕ್ಷಣ -ಶುಲ್ಕ ಹೆಚ್ಚಿಸಬಾರದು, ಸಹಾಯವಾಣಿ ಸ್ಥಾಪಿಸುವುದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ -ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ಸಾಮರ್ಥ್ಯ ವೃದ್ಧಿ

ಬೆಂಗಳೂರು: ಕರೊನಾ ಸಾಂಕ್ರಾಮಿಕ ರೋಗದ ಪರಿಣಾಮಗಳು ಹಾಗೂ ಭವಿಷ್ಯತ್ತಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಜ್ಞರ ಸಮಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸಿರಿಧಾನ್ಯ, ರಾಗಿ, ಖಾದ್ಯ ತೈಲ ಮತ್ತಿತರ ಅಗತ್ಯ ಆಹಾರ ಪದಾರ್ಥಗಳನ್ನು ಪಡಿತರ ವ್ಯವಸ್ಥೆಯಡಿ ವಿತರಿಸಬೇಕು ಎಂದು ಸಲಹೆ ನೀಡಿದೆ.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿ, ಅಂಗನವಾಡಿ ಕೇಂದ್ರಗಳನ್ನು ಪುನರಾರಂಭಿಸುವುದು ಈ ಶಿಫಾರಸುಗಳ ಪೈಕಿ ಮತ್ತೊಂದು ಪ್ರಮುಖ ಅಂಶವಾಗಿದೆ. ಆರೋಗ್ಯ, ಆಹಾರ, ಶಿಕ್ಷಣ, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ನ್ಯಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವಾರು ಸಲಹೆಗಳನ್ನು ನೀಡಿದೆ. ತಜ್ಞರ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಿ, ಪಾಲನಾ ವರದಿಯನ್ನು ಸಲ್ಲಿಸಬೇಕೆಂದು ಕೇಂದ್ರ, ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಿರ್ದೇಶಿಸಿದೆ.

ಕೆಳಸ್ತರ, ದುರ್ಬಲ, ವಲಸಿಗರು, ದಿನಗೂಲಿ, ಬೀದಿಬದಿ ವಾಸಿಗಳು, ಬಾಲ ಕಾರ್ವಿುಕರು ಮತ್ತು ಅಂಗವಿಕಲ ಮಕ್ಕಳ ಮೇಲೆ ಕರೊನಾ ವ್ಯತಿರಿಕ್ತ ಪರಿಣಾಮಬೀರಿದೆ. ಪೌಷ್ಟಿಕ ಆಹಾರ ಮತ್ತು ಆಹಾರಧಾನ್ಯ, ಆರೋಗ್ಯ, ಶಿಕ್ಷಣ, ಶಿಶುಪಾಲನಾ ಕೇಂದ್ರ, ರಕ್ಷಣೆ ಮತ್ತು ನ್ಯಾಯದ ಸೇವೆಗಳು ಏರುಪೇರಾಗಿರುವುದನ್ನು ಸಮಿತಿ ಗುರುತಿಸಿದೆ.

ಕಳವಳಕಾರಿ ಸ್ಥಿತಿ

ದೇಶದ 25 ಕೋಟಿ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದರೆ, ಯುನಿಸೆಫ್ ವರದಿಯಂತೆ ಅಂಗನವಾಡಿ ಸೇವೆಗಳ ವ್ಯತ್ಯಯದಿಂದಾಗಿ 6.4 ಕೋಟಿ ಮಕ್ಕಗಳು ಆಹಾರ ಹಕ್ಕಿನಿಂದ ವಂಚಿತರಾಗಿದ್ದಾರೆ. ಗ್ರಾಮೀಣ ಪ್ರದೇಶದ ಶೇ.15 ಕುಟುಂಬಗಳು ಮಾತ್ರ ಇಂಟರ್​ನೆಟ್ ಸೌಲಭ್ಯ ಹೊಂದಿದ್ದು, ಶೇ.75 ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪಾಲಕರು ಮಕ್ಕಳಿಗೆ ಡಿಜಿಟಲ್ ಸೌಕರ್ಯ ಕಲ್ಪಿಸಲು ಪರದಾಡುತ್ತಿದ್ದಾರೆ.

ಆನ್​ಲೈನ್ ಶಿಕ್ಷಣವೂ ಸೈಬರ್ ಕ್ರೈಮ್ ಖಾಸಗಿತನಕ್ಕೆ ಧಕ್ಕೆಯಂತಹ ಹೊಸ ಸಮಸ್ಯೆ ಹುಟ್ಟಿ ಹಾಕಿದೆ ಎಂಬ ಕಳವಳವನ್ನು ಸಮಿತಿ ವ್ಯಕ್ತಪಡಿಸಿದೆ. ಮಾನವ ಕಳ್ಳ ಸಾಗಣೆ ಅದರಲ್ಲೂ ಮಕ್ಕಳ ಕಳ್ಳ ಸಾಗಣೆ, ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ಹೆಚ್ಚಿರುವುದರತ್ತ ಬೆರಳು ತೋರಿಸಿದ್ದು, ಮಾನವ ಕಳ್ಳ ಸಾಗಣೆ ನಿಗ್ರಹ ದಳಗಳ ಬಲವರ್ಧನೆ ಹಾಗೂ ಹೊಸದಾಗಿ ಇಂತಹ ಘಟಕಗಳನ್ನು ಸ್ಥಾಪಿಸುವುದಕ್ಕೂ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದೆ.