ಜಿಲ್ಲೆ

ರಸ್ತೆ ಬದಿಯಲ್ಲೇ ಬಿದ್ದಿವೆ ಸಾವಿರಾರು ಲೀಟರ್ ಹಾಲಿನ ಪ್ಯಾಕೆಟ್​! ಬೆಚ್ಚಿಬಿದ್ದ ಜನತೆ

arunakunigal

ಆನೇಕಲ್: ಪ್ರತಿಷ್ಠಿತ ಬ್ರಾಂಡ್​ವುಳ್ಳ ಸಾವಿರಾರು ಲೀಟರ್​ ಹಾಲಿನ ಪ್ಯಾಕೇಟ್​ಗಳು ಎರಡು ದಿನದಿಂದ ರಸ್ತೆಬದಿಯಲ್ಲೇ ಬಿದ್ದಿದ್ದು, ಕುಡಿಯೋ ಹಾಲು ಇಲ್ಲಿಗ್ಯಾಕೆ ಬಂತು ಎಂಬುದಕ್ಕೆ ಉತ್ತರ ಸಿಗದೆ ಸ್ಥಳೀಯರು ಆತಂಕಗೊಂಡಿದ್ದಾರೆ.

ನಂದಿನಿ, ಅಕ್ಷಯಕಲ್ಪ, ಹೆರಿಟೇಜ್ ಬ್ರಾಂಡ್​ನ ಹಾಲಿನ ಪ್ಯಾಕೇಟ್​ಗಳು ಆನೇಕಲ್ ತಾಲೂಕಿನ ಹುಸ್ಕೂರು ಆರ್​ಟಿಒ ಕಚೇರಿ ಮುಂದೆ ಪತ್ತೆಯಾಗಿವೆ. ಸಾವಿರಾರು ಲೀಟರ್​ ಹಾಲನ್ನು ಮಣ್ಣುಪಾಲು ಮಾಡಿರುವುದೇಕೇ? ಇಷ್ಟೊಂದು ಹಾಲಿನ ಪ್ಯಾಕೆಟ್​ಗಳು ಎಲ್ಲಿಂದ ಬಂದವು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಹಾಲಿನ ಪ್ಯಾಕೇಟ್​ಗಳ ಮೇಲೆ ಅ.9ನೇ ತಾರೀಖು ಇದೆ. ಎರಡು ದಿನದಿಂದ ರಸ್ತೆಬದಿ ಬಿದ್ದಿರುವ ಹಾಲಿನ ಪ್ಯಾಕೇಟ್​ಗಳಿಗೆ ನಾಯಿಗಳು, ನೊಣಗಳು ಮುತ್ತಿಕೊಂಡಿವೆ. ಇದರ ಜತೆಗೆ ಪಿಪಿಇ ಕಿಟ್ ಕೂಡ ಅಲ್ಲೇ ಇದೆ. ಹಾಗಾಗಿ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಅದೆಷ್ಟೋ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಪುಟ್ಟ ಕಂದಮ್ಮಗಳಿಗೆ ಕುಡಿಯಲು ಹಾಲು ಕೊಡಿಸುವ ಶಕ್ತಿ ಇಲ್ಲದ ಬಡಜನರು ಲೆಕ್ಕವಿಲ್ಲದಷ್ಟು ಮಂದಿ ನಮ್ಮ ನಡುವೆಯೇ ಇದ್ದಾರೆ. ಅಂತಹದ್ದರಲ್ಲಿ ಅಮೃತಕ್ಕೆ ಸಮಾನವಾದ ಹಾಲನ್ನು ಈ ರೀತಿ ಮಣ್ಣುಪಾಲು ಮಾಡಿದ್ದೇಕೆ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.