ಗುರುಪುರ: ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಸಮಯದಲ್ಲಿ ಅವುಗಳ ಅಂತರ್‌ಸಂಬಂಧ ತಿಳಿದುಕೊಂಡು ಉತ್ತಮ ಪೀಳಿಗೆ ಹೊಂದುವಂತೆ ಮಾಡಲು ಪಿಲಿಕುಳ ಜೈವಿಕ ಉದ್ಯಾನದ ಕಾಳಿಂಗ ಸರ್ಪಗಳಿಗೆ ಮೈಕ್ರೋ ಚಿಪ್(ಸೂಕ್ಷ್ಮ ಬಿಲ್ಲೆ) ಅಳವಡಿಸಲಾಗಿದೆ.
ಪಿಲಿಕುಳ ಮೃಗಾಲಯದ ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ ಈ ಚಿಪ್‌ಗಳನ್ನು ಅಳವಡಿಸಲಾಗಿದೆ. ಬಾಹ್ಯ ನೋಟಕ್ಕೆ ಉರಗಗಳ ಲಿಂಗಭೇದ(ಗಂಡು- ಹೆಣ್ಣು) ಗುರುತಿಸಲು ಕಷ್ಟವಾಗುತ್ತದೆ. ವೈಜ್ಞಾನಿಕವಾಗಿ ಅವುಗಳ ಲಿಂಗಬೇಧ ಪತ್ತೆ ಹಚ್ಚಲು ಶೋಧ ಉಪಕರಣ ಉಪಯೋಗಿಸಲಾಗುತ್ತದೆ. ಉಪಕರಣಗಳಲ್ಲಿ ಅವುಗಳ ತೂಕ, ಉದ್ದಳತೆಯ ನಿಖರತೆ ಸಿಗುತ್ತದೆ. ಪಿಲಿಕುಳ ಮೃಗಾಲಯದಲ್ಲಿನ ಹುಲಿ, ಸಿಂಹ, ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯ ನಡೆದಿದೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಹೈನಾ, ತೋಳ, ಕಾಡುನಾಯಿ, ಕರಡಿ ಮತ್ತಿತರ ಪ್ರಾಣಿಗಳ ಲಿಂಗ ಪರೀಕ್ಷೆ ಮತ್ತು ಗುರುತಿಸುವಿಕೆ ಕಾರ್ಯ ನಡೆಸಲಾಗಿದೆ. ಪ್ರಾಣಿಗಳ ಚರ್ಮದೊಳಗೆ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಬಾಹ್ಯವಾಗಿ ಸೆನ್ಸಿಂಗ್ ರೆಕಾರ್ಡ್‌ನಿಂದ ಚಿಪ್‌ಗಳಲ್ಲಿ ನಮೂದಿಸಲಾದ ಕ್ರಮಸಂಖ್ಯೆ ಪಡೆಯಬಹುದಾಗಿದೆ. ಪಕ್ಷಿಗಳ ಲಿಂಗ ಗುರುತಿಸುವಿಕೆಗೆ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ. ಕಾಳಿಂಗ ಸರ್ಪಗಳಿಗೆ ಆಮದು ಮಾಡಿಕೊಳ್ಳಲಾದ ಮೈಕ್ರೋಚಿಪ್ ಉಪಕರಣ ಅಳವಡಿಸಲಾಗಿದೆ. ಇದರಿಂದ ಪ್ರಾಣಿಗಳಿಗೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಚಿಪ್ ಬದಲಿಸುವ ಅವಶ್ಯಕತೆ ಇರುವುದಿಲ್ಲ. ಇದು ಪ್ರಾಣಿಗಳ ದೇಹದಲ್ಲಿ ಜೀವನ ಪರ್ಯಂತ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.