ಜಿಲ್ಲೆ

ಕಾಮಗಾರಿ ಪ್ರಾರಂಭದಲ್ಲೇ ಎಂಜಿಎನ್‌ಆರ್‌ಇಜಿಎ ಅನುದಾನದ ಕೆಲಸ, ಕಾರ್ಯಗಳನ್ನ ಕೈಗೊಳ್ಳಿ- ಈಶ್ವರ ಕಾಂದೂ

Uttara Kannada - Subash Hegde

ಕಾರವಾರ: ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಎಂಜಿಎನ್‌ಆರ್‌ಇಜಿಎ  ಹಾಗೂ ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆಯಡಿ ಕೈಗೊಳ್ಳುವ ಕಟ್ಟಡ ಕಾಮಗಾರಿಗಳ ಪೈಕಿ ಪ್ರತಿ ಕಾಮಗಾರಿಗಳ ನರೇಗಾ ಅನುದಾನದ ಕೆಲಸ ಕಾರ್ಯಗಳನ್ನ ಪ್ರಾರಂಭದಲ್ಲೇ ಕೈಗೆತ್ತಿಕೊಂಡು ಮುಗಿಸಬೇಕು. ಬೇರೆ ಅನುದಾನ ಮೊದಲಿಗೆ ಬಳಸಿ ನಂತರ ನರೇಗಾ ಕೆಲಸ ಬಾಕಿಯಿಟ್ಟು ಕಾಮಗಾರಿ ಪೂರ್ಣಗೊಳಿಸಲು ಹಿಂದೇಟು ಹಾಕುವುದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಈಶ್ವರ ಕಾಂದೂ ರವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ  ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,‌ ಪಿಆರ್‌ಇಡಿ ಮತ್ತು ಆರ್‌ಡಬ್ಲ್ಯುಎಸ್‌, ತಾಲೂಕು  ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ಕಡಿಮೆ ಪ್ರಗತಿ ಸಾಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಾಗದೇ ಖಾಲಿಯಿರುವ ಸರಕಾರಿ ಕಟ್ಟಡಗಳನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ನೀಡಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೆಂದ್ರಗಳ ಸಂಖ್ಯೆ ಕಡಿಮೆಗೊಳಿಸಬೇಕು. ಪ್ರತಿಯೊಬ್ಬರೂ ನಿಗದಿತ ಗುರಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು.

ತಾಲ್ಲೂಕು ಭೇಟಿ ವೇಳೆ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ, ಕಾರ್ಯಕರ್ತೆಯರು ಹಾಗೂ ಸಹಾಯಕರ ಅಲಭ್ಯತೆ ಕಂಡು ಬರುತ್ತಿದೆ. ಹೀಗಾಗಿ ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಕಾರ್ಯ ಕೈಗೊಂಡು ಜಿಲ್ಲಾ ಪಂಚಾಯತ್‌ಗೆ ವರದಿ ಸಲ್ಲಿಸಬೇಕು. ತಾಲ್ಲೂಕಾ ಎನ್‌ಆರ್‌ಸಿ ಕೇಂದ್ರಕ್ಕೆ ಸ್ಯಾಮ್, ಮ್ಯಾಮ್ ಮಕ್ಕಳನ್ನ ಕರೆತಂದು ಜಾಗ್ರತೆವಹಿಸುವ ಕುರಿತು ಹೆಚ್ಚು ಕ್ರಮವಹಿಸಬೇಕು.

ಎಸ್‌ಬಿಎಂ ಯೋಜನೆಯಡಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಎಲ್ಲ ಕಸ ವಿಲೇವಾರಿ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಆಧ್ಯತೆಯ ಮೇರೆಗೆ ಬೂದು ನೀರು ನಿರ್ವಹಣ ಘಟಕ ಕಾಮಗಾರಿ ತೆಗೆದುಕೊಳ್ಳಬೇಕು. ಕೈಗೊಳ್ಳವ ಪ್ರತಿಯೊಂದು ವೈಯಕ್ತಿಕ ಶೌಚಾಲಯ ಕಾಮಗಾರಿಗಳ ಜೀಯೋಟ್ಯಾಗ್ ಬಾಕಿ ಉಳಿಯದಂತೆ ಕ್ರಮವಹಿಸಬೇಕು. ಜೊತೆಗೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಗಳ ಪ್ರತಿಯೊಬ್ಬ ಅಧಿಕಾರಿಗಳು, ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಸಮರ್ಪಕ ಅನುಷ್ಠಾನ ಹಾಗೂ ಗುಣಮಟ್ಟದ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಎಲ್ಲ ಎಇಇ ಅವರು ತಮ್ಮ ವ್ಯಾಪ್ತಿಯಲ್ಲಿನ ಗುತ್ತಿಗೆದಾರ ಕಂಪೆನಿಗಳಿಗೆ ಗುಣಮಟ್ದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿ ಯೋಜನೆಯು ಜನರಿಗೆ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬ್ಯಾಚ್-2, 3 ಮತ್ತು 4ರಲ್ಲಿ ಕೈಗೊಂಡ ಕಾಮಗಾರಿಗಳ ಮುಕ್ತಾಯ ಪ್ರಮಾಣದಲ್ಲಿ ಪ್ರಗತಿ ಕಡಿಮೆಯಿದ್ದು, ಮುಂದಿನ ಸಭೆಯೊಳಗೆ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದರು.

ನರೇಗಾದಡಿ ಮಾನವ ದಿನಗಳ ಸೃಜನೆಯ ಪ್ರಗತಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರಗತಿ ಕಡಿಮೆಯಾಗುತ್ತಿದೆ. ಹೀಗಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರುಗಳು ತಮ್ಮ ವ್ಯಾಪ್ತಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಶೇ. 100ರಷ್ಟು ನಿಗದಿತ ಗುರಿ ಸಾಧಿಸಲು ಕ್ರಮವಹಿಸಬೇಕು. ನರೇಗಾದಲ್ಲಿ 260ಕ್ಕೂ ಅಧಿಕ ವಿವಿಧ ಕಾಮಗಾರಿಗಳಿದ್ದು, ಗ್ರಾಪಂ ಪಿಡಿಒ ರವರು ಕೇವಲ ಕಾಲುವೆ, ಕೆರೆಯಂತಹ ಕಾಮಗಾರಿಗಳಿಗೆ ಸೀಮಿತವಾಗದೇ ಬೇರೆ ಬೇರೆ ಕಾಮಗಾರಿಗಳನ್ನ ತೆಗೆದುಕೊಂಡು ಮಾನವ ದಿನ ಸೃಜನೆಯ ಪ್ರಗತಿ ಸಾಧಿಸಬೇಕು. ಇಒ ಹಾಗೂ ಎಡಿ ಅವರುಗಳು ಪ್ರತೀ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳಿಗೆ ವಿಶೇಷವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ಹೆಚ್ಚಿನ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪಿಡಿಒ ಗಳು ಅನುಷ್ಠಾನ ಇಲಾಖೆಗಳೊಂದಿಗೆ ಸಮಾಲೋಚಿಸಿ ಏನಾದರೂ ತಾಂತ್ರಿಕ ಸಮಸ್ಯೆಗಳಿದ್ದರೆ ಪರಸ್ಪರ ಬಗೆಹರಿಸಿಕೊಂಡು ಒಗ್ಗೂಡಿಕೊಂಡು ಕಾರ್ಯನಿರ್ವಹಿಸಬೇಕು. ಐಇಸಿ, ಎಂಐಎಸ್ ಹಾಗೂ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿಎಫ್‌ಟಿ, ಜಿಕೆಎಂ, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗಳು ಒಗ್ಗೂಡಿಕೊಂಡು ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನಗಳನ್ನು ಆಯೋಜಿಸಿ ಜನರಿಗೆ ನರೇಗಾ ಕುರಿತು ಜಾಗೃತಿ ಮೂಡಿಸಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ವಾರ್ಷಿಕವಾರು ಕಾಮಗಾರಿಗಳ ಪ್ರಗತಿಯನ್ನು ಶೇಕಡಾವಾರು ವಿಭಾಗಗಳನ್ನು ಮಾಡಿಕೊಂಡು ಕಾಮಗಾರಿಗಳ ಪ್ರಾರಂಭ, ಮುಕ್ತಾಯಕ್ಕೆ ಆದ್ಯತೆ ನೀಡಬೇಕು. ಹಂತ-1 ಮತ್ತು ಹಂತ್-2ರಲ್ಲಿನ ಜೀಯೋಟ್ಯಾಗ್ ಪೂರ್ಣಗೊಳಿಸಬೇಕು. ಏರಿಯಾ ಆಫಿಸರ್ ವಿಜಿಟ್ ಪ್ರಗತಿ ಸಾಧಿಸಬೇಕು. ಕಾಲ ಕಾಲಕ್ಕೆ ಸಾಮಜಿಕ ಲೆಕ್ಕಪರಿಶೋಧನಾ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಆಡಳಿತ ಶಾಖೆಯ ಉಪ ಕಾರ್ಯದರ್ಶಿಗಳಾದ ಶ್ರೀ ನಾಗೇಶ ರಾಯ್ಕರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿಗಳಾ ಶ್ರೀ ಆನಂದಸಾ ಅಬೀಬ, ಮುಖ್ಯ ಯೋಜನಾಧಿಕಾರಿಗಳಾದ ಶ್ರೀ ವಿನೋದ ಅಣ್ವೇಕರ, ಯೋಜನಾ ನಿರ್ದೇಶಕರಾದ ಶ್ರೀ ಕರೀಂ ಅಸಾದಿ, ಶಿಕ್ಷಣ ಇಲಾಖೆಯ ಕಾರವಾರ ಮತ್ತು ಶಿರಸಿಯ ಡಿಡಿಪಿಐ, ಡಿಡಿಪಿಯು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ಎಲ್ಲ ತಾಲ್ಲೂಕು ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರುಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಡಿಪಿಒ ಗಳು, ನರೇಗಾ, ಎಸ್‌ಬಿಎಂ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಯಡಿ ಕಾರ್ಯನಿರ್ವಹಿಸುವ ಸಮಾಲೋಚಕರು, ಐಇಸಿ ಸಂಯೋಜಕರು, ಜಿಪಂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತಿಯೊಬ್ಬ ರಾಜ್ಯ ಸರಕಾರಿ, ಹೊರಗುತ್ತಿಗೆ ನೌಕರರು, ಸಿಬ್ಬಂದಿ ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಪ್ರತಿವರ್ಷ ಕೇವಲ 20ರೂ ಪ್ರೀಮಿಯಂ ತುಂಬುವ ಮೂಲಕ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಹಾಗೂ ವಾರ್ಷಿಕ 436 ರೂ ಪ್ರೀಮಿಯಂ ತುಂಬುವ ಮೂಲಕ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಇನ್ಶುರೆನ್ಸ್ ಮಾಡಿಸಿಕೊಳ್ಳಬೇಕಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಇನ್ಶುರೆನ್ಸ್ ಮಾಡಿಸಿದವರು ಮೃತರಾದರೆ 2.50 ಲಕ್ಷದವರೆಗೂ ಇನ್ಶುರೆನ್ಸ್ ಸಿಗಲಿದೆ. ಹಾಗೇ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಇನ್ಶುರೆನ್ಸ್ ಮಾಡಿಸಿದವರು ಮೃತರಾದರೆ 4 ಲಕ್ಷದವರೆಗೆ ಇನ್ಶುರೆನ್ಸ್ ದೊರೆಯಲಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಈಶ್ವರ ಕಾಂದೂ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ, ಉತ್ತರ ಕನ್ನಡ.