ಮಾಗಳ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟನೆ ವೇಳೆ ಶಾಸಕ ಕೃಷ್ಣನಾಯ್ಕ, ಗ್ರಾಪಂ ಅಧ್ಯಕ್ಷೆ ಎಲ್.ಬಸವ್ವ, ದೈಹಿಕ ಶಿಕ್ಷಣ ಅಧೀಕ್ಷಕ ಕೆ.ರಫಿ ಅಹಮದ್, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ ಇತರರಿದ್ದರು. 
ಜಿಲ್ಲೆ

ಜ್ಞಾಪಕಶಕ್ತಿ ಹೆಚ್ಚಳಕ್ಕೆ ಕ್ರೀಡೆಗಳು ಸಹಕಾರಿ

Kopala - Desk - Eraveni

ಹೂವಿನಹಡಗಲಿ: ವಿದ್ಯಾರ್ಥಿ ದೆಸೆಯಿಂದಲೇ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಮಾಗಳ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಾತನಾಡಿದರು.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಟ, ವ್ಯಾಯಾಮ, ನಡಿಗೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

ಆಟಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಹೆಚ್ಚುವುದರೊಂದಿಗೆ ಕ್ರಿಯಾತ್ಮಕವಾಗಿ ಯೋಚಿಸುವ ಶಕ್ತಿ ದೊರಕುತ್ತದೆ. ಆಟದಲ್ಲಿ ಸೋಲು, ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದರು.

ಕೆನರಾ ಬ್ಯಾಂಕ್ ಸಿಎಸ್‌ಆರ್ ಅನುದಾನದಡಿ ಶಾಲೆಯಲ್ಲಿ ನಿರ್ಮಿಸಲಾದ ಶುದ್ಧ ಕುಡಿವ ನೀರಿನ ಘಟಕವನ್ನು ಉದ್ಘಾಟಿಸಿದರು. ಬಿಇಒ ವಿ.ಮಹೇಶ್ ಪೂಜಾರ, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ದೈಹಿಕ ಶಿಕ್ಷಣ ಅಧೀಕ್ಷಕ ಕೆ.ರಫಿ ಅಹಮದ್, ಗ್ರಾಪಂ ಅಧ್ಯಕ್ಷೆ ಎಲ್.ಬಸವ್ವ, ಎಸ್ಡಿಎಂಸಿ ಅಧ್ಯಕ್ಷ ಎಲ್.ಮಂಜುನಾಥ, ವೈ.ವಿರೂಪಾಕ್ಷಪ್ಪ ಇದ್ದರು.