ಅಂದು ಹಾನಿಗೀಡಾಗದೆ ಉಳಿದ ಉಪ್ಪಿನಂಗಡಿಯ ಮಹಾಕಾಳಿ ದೇವಾಲಯ. 
ಜಿಲ್ಲೆ

ಜಿಲ್ಲೆಯನ್ನು ಮುಳುಗಿಸಿದ ಮಹಾನೆರೆಯ ನೆನಪುಗಳು : ಕಾಡಿದ ದುಃಸ್ವಪ್ನಕ್ಕೆ ಇಂದಿಗೆ 50 ವರ್ಷ

ವಿನಯ್ ಉಪ್ಪಿನಂಗಡಿ

ಉಪ್ಪಿನಂಗಡಿ ಸೇರಿ ದ.ಕ ಜಿಲ್ಲೆಯ ನೇತ್ರಾವತಿ ನದಿ ಪಾತ್ರದ ಜನತೆ ನೆರೆಗೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡ, ಪ್ರಕೃತಿಯ ಮುನಿಸಿಗೆ ಸಾವಿರಾರು ಜನರು ನಿರ್ಗತಿಕರಾದ ಭೀಕರ ದಿನ 1974, ಜುಲೈ 26. ಉಪ್ಪಿನಂಗಡಿ ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ತಾಣದಲ್ಲಿ, ಎರಡೂ ನದಿಗಳು ಉಕ್ಕಿ ಹರಿದು ಹಲವಾರು ಮನೆಗಳನ್ನು, ಅಂಗಡಿ-ಮುಂಗಟ್ಟುಗಳನ್ನು ಆಪೋಷಣ ಪಡೆದ ರೌದ್ರ ರೂಪ ಜನತೆಯ ಮನದಲ್ಲಿ ಇಂದೂ ಉಳಿದಿದೆ.

ಎಂದಿನಂತೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಮುಂದೆ ನದಿಗಳು ಸಂಗಮಿಸಿದಾಗ ಗಂಗಾ ಪೂಜೆ ನರವೇರಿಸಲಾಗಿತ್ತು. ಪೂಜಾ ಸಮಯದ ಪ್ರಾರ್ಥನೆಗೆ ಗಂಗಾಮಾತೆ ಒಲಿದು ತನ್ನ ನಡೆ ಬದಲಾಯಿಸುತ್ತಾಳೆಂಬ ಭಾವನೆ ಭಕ್ತರದ್ದು. ಜು.25ರಂದು ಸಂಗಮಿಸಿ ಯಥಾಸ್ಥಿತಿ ಕಾಯ್ದುಕೊಂಡ ನದಿಗಳು ರಾತ್ರಿಯಾಗುತ್ತಿದ್ದಂತೆ ಪೇಟೆಯನ್ನಾವರಿಸಿ ಹರಿಯಲಾರಂಭಿಸಿದವು.

ಅಪಾಯದ ಸುಳಿವು ಪಡೆದುಕೊಂಡ ಪಂಚಾಯಿತಿ, ಅಂದಿನ ಸಾಮಾಜಿಕ ನೇತಾರ ರಾಮದಾಸ್ ಪೈ ಅವರ ಅಂಬಾಸಿಡರ್ ಕಾರಿಗೆ ಮೈಕ್ ಕಟ್ಟಿ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಿತು. ಮುಂಜಾನೆಯವರೆಗೆ ನದಿಗಳು ಉಪ್ಪಿನಂಗಡಿ ಸ್ಮಶಾನದ ಭಾಗದಿಂದ ಪೇಟೆಗೆ ನುಗ್ಗಿ, ವೇಗವಾಗಿ ಹರಿಯುತ್ತಾ ಕಟ್ಟಡಗಳನ್ನೆಲ್ಲ ಧರೆಗುರುಳಿಸಿದ್ದವು. ಮನೆಗಳು, ಸಂಗ್ರಹಿಸಿಟ್ಟ ಆಹಾರ ಧಾನ್ಯಗಳು, ಬಟ್ಟೆಬರೆ, ಪಾತ್ರೆ-ಪಗಡಿ ಎಲ್ಲವೂ ನೆರೆಯಲ್ಲಿ ಕೊಚ್ಚಿ ಹೋದವು. ಎಲ್ಲವನ್ನೂ ಕಳಕೊಂಡ ಜನರ ರೋದನ ಮುಗಿಲು ಮುಟ್ಟಿತ್ತು. ನೂರಾರು ಜನರನ್ನು ನಿರ್ಗತಿಕರನ್ನಾಗಿಸಿದ ನೆರೆ ಜು.26ರ ಸಂಜೆ ಬಳಿಕ ಇಳಿಮುಖವಾಯಿತು. ಆದರೆ ನೆರೆಯಿಂದ ನಲುಗಿದ ಜನರ ದೌರ್ಭಾಗ್ಯದ ಬದುಕು ಹಲವು ವರ್ಷಗಳವರೆಗೆ ಮುಂದುವರಿದಿತ್ತು.

ಕುಸಿದು ಬಿದ್ದ ಕೂಡು ಕುಟುಂದ ಮನೆ

ಇಳಂತಿಲ ಅರ್ಬಿಯ ತಿಮ್ಮಪ್ಪ ಗೌಡ ಎಂಬುವರ ಅವಿಭಕ್ತ ಕುಟುಂಬದ ಮನೆಯಲ್ಲಿ 50 ಮಂದಿ ಇದ್ದರು. ನದಿ ತಟದಿಂದ ಮೂರು ಹಂತದ ಎತ್ತರ ಪ್ರದೇಶದಲ್ಲಿ ಮನೆ ಇತ್ತು. 25ರಂದು ನದಿ ತಟದ ಗದ್ದೆಯಲ್ಲಿದ್ದ ನೆರೆ ನೀರು, ಶುಕ್ರವಾರ ನಸುಕಿನ ವೇಳೆ ಮೇಲೇರಿ ಬಂದು ಮನೆಯನ್ನು ಆವರಿಸಿದಾಗ ಎಲ್ಲರೂ ಮನೆಯಿಂದ ಹೊರ ಬಂದಿದ್ದರು. ಮನೆಯ ಅಟ್ಟಳಿಗೆಯಲ್ಲಿ 28 ಅಕ್ಕಿ ಮುಡಿಗಳಿದ್ದವು. ನೀರು ಮೇಲೇರಿ ಮನೆ ಸುತ್ತಮುತ್ತಲ ಕಟ್ಟಡಗಳನ್ನು ಧರೆಗುರುಳಿಸಿ, ಬಳಿಕ ಮನೆಯೇ ಕುಸಿದಾಗ ಎಲ್ಲರ ಮುಖದಲ್ಲಿ ಕಣ್ಣೀರು ಹರಿಯುತ್ತಿತ್ತು. ತಿನ್ನುವ ಅನ್ನ, ತೊಡುವ ಬಟ್ಟೆ-ಬರೆ, ಇರಲು ಆಸರೆ ಎಲ್ಲವನ್ನೂ ಕಳಕೊಂಡು 50 ಮಂದಿ ಬದುಕುವುದು ಹೇಗೆ ಎಂಬ ಪ್ರಶ್ನೆ ಮನದಲ್ಲಿ ಎದುರಾಗಿತ್ತು. ಸರ್ಕಾರ ಕೊಟ್ಟ 4 ಸಾವಿರ ರೂ.ನಲ್ಲಿ ಹೊಸ ಮನೆ ನಿರ್ಮಿಸುವುದು ಅಸಾಧ್ಯವಾಗಿತ್ತು. ಈ ಘಟನೆ ನೆನಪಿಸುವ ತಿಮ್ಮಪ್ಪ ಗೌಡರ ಕಿರಿಮಗ, ಉದ್ಯಮಿ ಆನಂದ ಗೌಡ, ‘ಒಂದು ವರ್ಷ ಶಾಲೆಗೆ ಹೋಗಲಾಗಲಿಲ್ಲ. ಅವರಿವರ ಮನೆಯಲ್ಲಿ ಆಶ್ರಯ ಪಡೆದಿದ್ದೆವು’ ಎಂದು ನೆನಪಿಸಿಕೊಳ್ಳುತ್ತಾರೆ.

ಬಾಡಿಗೆ ಗೃಹದಲ್ಲಿ ವಾಸ

ಕುಮಾರಧಾರಾ ನದಿ ಪಾರ್ಶ್ವದಲ್ಲಿ ಮನೆ ಹೊಂದಿದ್ದ, ಜವುಳಿ ಉದ್ಯಮಿ ಚಂದ್ರಶೇಖರ್ ನೆರೆ ವ್ಯಾಪಿಸುತ್ತಿದ್ದಂತೆಯೇ ಮುಳುಗಡೆ ಪ್ರದೇಶದಲ್ಲಿದ್ದುದರಿಂದ ಕುಟುಂಬವನ್ನು ಸ್ಥಳಾಂತರಿಸಿದರು. ನೆರೆ ಪೇಟೆಯನ್ನಾಕ್ರಮಿಸಿದ ಬಳಿಕ ಮನೆಯ ಬಳಿಗೆ ಹೋಗುವಂತಿರಲಿಲ್ಲ. ಬಳಿಕ ನೋಡಿದಾಗ ಬಿದ್ದು ಹೋಗಿತ್ತು. ಬಳಿಕ ಅಲ್ಲಿಯೇ ಹೊಸ ಮನೆ ನಿರ್ಮಿಸಲಾಯಿತಾದರೂ, ಪದೇಪದೆ ಕಾಡುತ್ತಿದ್ದ ನೆರೆ ನೀರಿಗೆ ಬೇಸತ್ತು ಬಾಡಿಗೆ ಮನೆಗೆ ವಾಸ ಬದಲಾಯಿಸಿದ್ದರು.

ಕೊಚ್ಚಿ ಹೋದ ಪ್ರಾಣಿಗಳು

ದೇವಳದ ವಠಾರದಲ್ಲಿದ್ದ ಭಜನಾ ಮಂಡಳಿಯ ಸ್ವತ್ತುಗಳನ್ನು ರಕ್ಷಿಸುವ ಸಲುವಾಗಿ ಅಲ್ಲಿಂದ ಮೇಲಿನ ಮನೆಗೆ ಸ್ಥಳಾಂತರಿಸುವುದು, ಅಲ್ಲಿಗೂ ನೆರೆ ನೀರು ಬಂದಾಗ ಮತ್ತೆ ಸ್ಥಳಾಂತರಿಸುವುದು ಹೀಗೆ ನಾವೆಲ್ಲಾ ತುಂಬಾ ಬ್ಯುಸಿಯಾಗಿದ್ದ ಸಮಯ. ಇಳಂತಿಲದ ಕಡವಿನ ಬಾಗಿಲು ಎಂಬಲ್ಲಿದ್ದ ಪಟೇಲ್ ಮನೆತನದ ಮನೆಯಲ್ಲಿ ನೆರೆಯಿಂದ ನಿರ್ಗತಿಕರಾದವರಿಗೆ ಸರ್ಕಾರದ ವತಿಯಿಂದ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಅಂದು ಕಾಲೇಜು ವಿದ್ಯಾರ್ಥಿಗಳಾಗಿದ್ದ ನಮಗೆ, ಪ್ರಾಣಿಗಳು ನೆರೆ ನೀರಿನಲ್ಲಿ ಸಾಲಾಗಿ ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡಾಗ ಪ್ರವಾಹ ವೀಕ್ಷಿಸುವ ಕುತೂಹಲ ಕರಗಿಹೋಯಿತು. ಉಪ್ಪಿನಂಗಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮನೆ ಮಠ ಕಳೆದುಕೊಂಡವರಿಗೆ ಆಶ್ರಯ ಕಲ್ಪಿಸಲಾಯಿತು. 74ರ ನೆರೆಯ ಬಳಿಕ ಚೇವಡ್ಕವಾಗಿದ್ದ ಇಂದಿನ ರಾಮನಗರ, ಜನವಸತಿ ಕೇಂದ್ರವಾಯಿತು. ನೆಕ್ಕಿಲಾಡಿಯಲ್ಲಿಯೂ ಜನ ವಸತಿ ಹೆಚ್ಚಾಯಿತು ಎಂದು ಪ್ರಸಕ್ತ ನಿವೃತ್ತ ಬ್ಯಾಂಕ್ ಉದ್ಯೋಗಿ ಐ.ಚಿದಾನಂದ ನಾಯಕ್ ನೆನಪಿಸಿಕೊಳ್ಳುತ್ತಾರೆ.

ಉಳಿದದ್ದು ಮಹಾಕಾಳಿ ಗುಡಿ ಮಾತ್ರ

ಎಲ್ಲ ಮನೆ ಕಟ್ಟಡಗಳು ನೆರೆಯಲ್ಲಿ ಕೊಚ್ಚಿ ಹೋದರೂ ನದಿ ಸಂಗಮ ತಟದಲ್ಲಿರುವ ಮಹಾಕಾಳಿ ಅಮ್ಮನವರ ಗುಡಿ ಮಾತ್ರ ನೀರಿನಲ್ಲಿ ಮುಳುಗಿದ್ದರೂ ಇಡಿಯಾಗಿ ಉಳಿದದ್ದು ಒಂದು ಅಚ್ಚರಿ. ಇದು ದೈವೀ ಶಕ್ತಿಯ ಪವಾಡ ಎಂದೇ ಜನ ನಂಬಿದ್ದಾರೆ.