ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ಕಳೆದ ಶನಿವಾರ (ಸೆ.19) ರಾಜ್ಯದಾದ್ಯಂತ ಆಯೋಜಿಸಲಾಗಿದ್ದ ಮೆಗಾ ಇ-ಲೋಕ್ ಅದಾಲತ್ ಅದ್ಭುತ ಯಶಸ್ಸು ಕಂಡಿದೆ ಎಂದು ಪ್ರಾಧಿಕಾರ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ತಿಳಿಸಿದರು.
ನಗರದ ಸಿದ್ದಯ್ಯ ರಸ್ತೆಯಲ್ಲಿರುವ ನ್ಯಾಯದೇಗುಲದ ಕೆಎಸ್‌ಎಲ್‌ಎಸ್‌ಎ ಸಭಾಗಂಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 875 ಪೀಠಗಳಲ್ಲಿ ನಡೆದ ಮೆಗಾ ಇ-ಲೋಕ್ ಅದಾಲತ್‌ನಲ್ಲಿ ಒಟ್ಟು 1,15,925 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಮೂಲಕ ದಾಖಲೆ ಯಶಸ್ಸು ಸಾಧಿಸಲು ಕಾರಣರಾದ ಎಲ್ಲ ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇ-ಲೋಕ್ ಅದಾಲತ್ ಅಭಿಯಾನಕ್ಕೆ ಬೆಂಬಲ ನೀಡಿದ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮೆಗಾ ಇ-ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಮೊದಲಿಗೆ 2.31 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಗುರುತಿಸಲಾಗಿತ್ತು. ಮೋಟಾರು ವಾಹನ ಅಪಘಾತ, ಚೆಕ್ ಬೌನ್ಸ್, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ರಾಜೀ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು ಸೇರಿ ಸಾಕಷ್ಟು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಗುರುತಿಸಿದ್ದೆವು. ಇವುಗಳಲ್ಲಿ ಶನಿವಾರ ನಡೆದ ಲೋಕ್ ಅದಾಲತ್ ಮೂಲಕ ಒಟ್ಟು 1.15 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ದಂಡ ಕಟ್ಟಿ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳಲ್ಲಿ 27.33 ಕೋಟಿ ರೂ. ದಂಡದ ಮೊತ್ತವನ್ನು ಸರ್ಕಾರಕ್ಕೆ ಸಂಗ್ರಹಿಸಿಕೊಡಲಾಗಿದ್ದು, 330.30 ಕೋಟಿ ರೂ. ಹಣ ಸಂತ್ರಸ್ತರಿಗೆ ಪರಿಹಾರವಾಗಿ ಸಿಕ್ಕಿದೆ. ಒಟ್ಟಾರೆ ರಾಜಿಯಾದ ಮೊತ್ತ 357.63 ಕೋಟಿ ರೂ. ಆಗಿದೆ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ವಿವರಿಸಿದರು.