ವಿಜಯವಾಣಿ ಸುದ್ದಿಜಾಲ ಬೈಂದೂರು
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆ ಹೋಬಳಿ ಗ್ರಾಮಗಳಿಗೆ ಸಂಬಂಧಿಸಿದಂತೆ 94ಸಿ ಅರ್ಜಿಗಳು ಹಾಗೂ ಬಗರ್‌ಹುಕುಂ ಅರ್ಜಿಗಳ ಶೀಘ್ರ ವಿಲೇವಾರಿ ಬಗ್ಗೆ ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಈ ಕುರಿತು ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಕ್ರಿಯಿಸಿದ್ದು, ಸೆಪ್ಟೆಂಬರ್‌ನಿಂದ ಡಿಸೆಂಬರ್ ಅಂತ್ಯದವರೆಗೆ 38 ಅರ್ಹ ಫಲನುಭವಿಗಳಿಗೆ 94ಸಿ ಅಡಿ ಹಕ್ಕು ಪತ್ರ ನೀಡಲಾಗಿದೆ. 2025ರ ಜನವರಿ ಅಂತ್ಯಕ್ಕೆ ಎಲ್ಲ ಅರ್ಹ 94ಸಿ ಅರ್ಜಿಗಳು ವಿಲೇವಾರಿಮಾಡಬೇಕು. ಜನವರಿ ಎರಡನೇ ವಾರದಲ್ಲಿ 94ಸಿ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಂಡು ಅರ್ಜಿಗಳ ತ್ವರಿತ ವಿಲೇಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕು ಕಚೇರಿಯಲ್ಲಿ ದೊಡ್ಡ ಸಂಖ್ಯೆಗಳಲ್ಲಿ ಕಡತಗಳು ವಿಲೇವಾರಿಗೆ ಬಾಕಿ ಇವೆ. 80 ಕಡತಗಳಿಗೆ 3ಬಿ ವಿಚಾರಣೆ ಬಾಕಿ ಇವೆ. 3ಬಿ ವಿಚಾರಣೆ ತ್ವರಿತಗೊಳಿಸಬೇಕಿದ್ದು, ಇದಕ್ಕಾಗಿ ವಿಶೇಷ ಅಂದೋಲನ ಮಾದರಿಯಲ್ಲಿ ಕಾರ್ಯಯೋಜನೆ ರೂಪಿಸಬೇಕು ಎಂದು ತಹಸೀಲ್ದಾರರಿಗೆ ಸೂಚಿಸಿದರು.
ವಂಡ್ಸೆ ಹೋಬಳಿಯಲ್ಲಿ ಇರುವ ಅಕ್ರಮ ಸಕ್ರಮ ಬಗರ್ ಹುಕುಂ ನಮೂನೆ 50, 53 ಹಾಗೂ ನಮೂನೆ 57ರಡಿ ಅರ್ಹ ಅರ್ಜಿಗಳು ಸುಮಾರು 409 ಇದ್ದು, ಈ ಎಲ್ಲ ಅರ್ಜಿಗಳನ್ನು ತಂತ್ರಾಂಶಕ್ಕೆ ಅಳವಡಿಸಿ ಗ್ರಾಮ ಆಡಳಿತ ಅಧಿಕಾರಿಗಳ ಹಂತದಿಂದ ಕಂದಾಯ ನಿರೀಕ್ಷಕರ ಹಂತ ಹಾಗೂ ಅಲ್ಲಿಂದ ಮುಂದಿನ ಹಂತಕ್ಕೆ ಅಪ್‌ಲೋಡ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು. ಕುಂದಾಪುರ ತಹಸೀಲ್ದಾರ್, ಉಪ ತಹಸೀಲ್ದಾರ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಜನರ ಮನೆ ಬಾಗಿಲಿಗೆ ಹೋಗಿ ಅವರಿಗೆ ಹಕ್ಕು ಪತ್ರ ಸಿಗುವ ಬಗ್ಗೆ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು. ಗ್ರಾಮ ಆಡಳಿತ ಅಧಿಕಾರಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕಿದ್ದು, ಸಾರ್ವಜನಿಕ ಅದಾಲತ್‌ಗಳನ್ನು ಕೈಗೊಂಡು ಪ್ರತಿ ಫಲಾನುಭವಿಗೆ ಭೂಮಿ ಹಕ್ಕು ದೊರೆಯುವಂತಾಗಬೇಕು. ಇದಕ್ಕಾಗಿ ಈಗಿನಿಂದಲೇ ಪ್ರತಿ ಹಂತದಲ್ಲೂ ಯೋಜನೆ ರೂಪಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸೂಚಿಸಿದರು.
ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ನಡೆದಿದ್ದು, ಈ ಸಂದರ್ಭ ಶಾಸಕರು ಮಾತನಾಡಿ, 94ಸಿ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳಿಗೆ ಕೂಡಲೇ ಹಕ್ಕುಪತ್ರ ಮಂಜೂರುಗೊಳಿಸಬೇಕು ಎಂದು ಆದೇಶಿಸಿದರು. ಜನವರಿ ಎರಡನೇ ವಾರದಲ್ಲಿ ಬಗರ್ ಹುಕುಂ ಕಡತ ವಿಲೇವಾರಿ ಸಪ್ತಾಹ ಆಯೋಜನೆಯಾಗಲಿದ್ದು, ಬಾಕಿ ಇರುವ ಕಡತಗಳ ವಿಲೇವಾರಿಗೆ ಕ್ರಮಕೈಗೊಳ್ಳಲಾವುದು ಎಂದು ಭರವಸೆ ನೀಡಿದರು.