ಜಿಲ್ಲೆ

ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ: ರಬ್ಬರ್ ಬೆಳೆಗಾರರ ಮಾರಾಟ, ಸಂಸ್ಕರಣ ಸಹಕಾರಿ ಸಂಘದ ಸಭೆ

ಉಪ್ಪಿನಂಗಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ನೆಲ್ಯಾಡಿಯಲ್ಲಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, 2023-24ನೇ ಸಾಲಿನಲ್ಲಿ ಸಂಘ 34.54 ಕೋಟಿ ರೂ.ವ್ಯವಹಾರ ಮಾಡಿದೆ. ಕಳೆದ ಸಾಲಿನಲ್ಲಿ ಸಂಘ 26.56 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಸಂಘಕ್ಕೆ ರಬ್ಬರ್ ಮಾರಾಟ ಮಾಡಿದ ಸದಸ್ಯರಿಗೆ ಪ್ರತಿ ಕೆ.ಜಿ.ರಬ್ಬರ್‌ಗೆ 50 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದರು.

23-24ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ರಬ್ಬರ್ ಹಾಕಿದ ತಲಾ ಮೂವರು ಸದಸ್ಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಸಭೆಯಲ್ಲಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ರಾಯ್ ಅಬ್ರಹಾಂ, ನಿರ್ದೇಶಕರಾದ ಸಿ.ಜೋರ್ಜ್‌ಕುಟ್ಟಿ, ಎನ್.ವಿ.ವ್ಯಾಸ, ರಮೇಶ್ ಕಲ್ಪುರೆ, ಸುಭಾಷ್ ನಾಯಕ್ ಎಸ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಬೈರ ಮುಗೇರ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ವರದಿ ಮಂಡಿಸಿದರು. ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸ್ವಾಗತಿಸಿ, ರಾಯ್ ಅಬ್ರಹಾಂ ವಂದಿಸಿದರು. ಸಿಬ್ಬಂದಿ ರುಕ್ಮಯ ನಿರೂಪಿಸಿದರು.