ಮೂಡುಬಿದಿರೆ: ಸಮಾಜದ ಅಂಕುಡೊಂಕುಗಳನ್ನು ತಿಳಿದು, ತಿದ್ದಿ ಹೇಳುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಮೂಡುಬಿದಿರೆಗೆ ನಿವೇಶನ ಒದಗಿಸಲು ವಿವಿಧ ಹಂತದಲ್ಲಿ ಪ್ರಯತ್ನ ಮಾಡಿದ್ದೇನೆ. ಇನ್ನು ಆರೇಳು ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಪತ್ರಿಕಾ ಭವನ ಲೋಕಾರ್ಪಣೆಗೊಳ್ಳಲಿದ್ದು, ಮೂಡುಬಿದಿರೆಗೆ ಹೆಮ್ಮೆಯ ವಿಷಯ. ವಿವಿಧ ಹಂತಗಳಲ್ಲಿ ಭವನ ನಿರ್ಮಾಣಕ್ಕೆ ಒಟ್ಟು 25 ಲಕ್ಷ ರೂ. ಅನುದಾನ ಆದಷ್ಟು ಶೀಘ್ರ ನೀಡುತ್ತೇನೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಭರವಸೆ ನೀಡಿದರು.
ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್‌ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಂಗಳವಾರ ಸಮಾಜ ಮಂದಿರದಲ್ಲಿ ಆಯೋಜಿಸಲಾದ ಮಾಧ್ಯಮ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದರು. ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸದಲ್ಲಿ ಪತ್ರಕರ್ತ ವಾಲ್ಟರ್ ನಂದಳಿಕೆ, ಭವಿಷ್ಯದಲ್ಲಿ ಮಾಧ್ಯಮಗಳಿಗಿರುವ ಸವಾಲುಗಳು ಕುರಿತು ಉಪನ್ಯಾಸ ನೀಡಿದರು.
ಪತ್ರಕರ್ತ ವಾಸುದೇವ ಭಟ್ ಮಾರ್ನಾಡು ಅವರಿಗೆ ಪ್ರೆಸ್ ಕ್ಲಬ್ ಗೌರವ ನೀಡಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಸಾಧಕರಾದ ರುಚಿರಾ ಕುಂದರ್, ಸುಶಾಂತ್ ದರೆಗುಡ್ಡೆ, ಸಿಂಚನಾ ಮೂಡುಮಾರ್ನಾಡು ಅವರನ್ನು ಗೌರವಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಕೋಶಾಧಿಕಾರಿ ಪ್ರಸನ್ನ ಹೆಗ್ಡೆ, ಸದಸ್ಯರಾದ ಜೈಸನ್ ತಾಕೊಡೆ, ನವೀನ್ ಸಾಲ್ಯಾನ್, ಅಶ್ರಫ್ ವಾಲ್ಪಾಡಿ, ಯಶೋಧರ ವಿ.ಬಂಗೇರ, ರಾಘವೇಂದ್ರ ಶೆಟ್ಟಿ, ಪುನೀತ್ ಮುಂಡ್ಕೂರು, ಶರತ್ ದೇವಾಡಿಗ, ಪ್ರೆಸ್ ಕ್ಲಬ್ ನಿರ್ವಾಹಕಿ ದೀಪ್ತಿ ಉಪಸ್ಥಿತರಿದ್ದರು.
ತಪ್ಪಿಗೆ ಕ್ಷಮೆ ಇದೆ. ಮೋಸಕ್ಕೆ ಕ್ಷಮೆ ಇಲ್ಲ. ಇದನ್ನು ಅರಿತು ಸಮಾಜವನ್ನು ತಿದ್ದುವ ಕೆಲಸವನ್ನು ಮಾಧ್ಯಮ ಮಾಡಬೇಕಾಗಿದೆ. ಜನರ ಮನಸ್ಥಿತಿಯನ್ನು ಒಳ್ಳೆಯ ವಿಚಾರಕ್ಕೆ ಬದಲಾಯಿಸಲು ಪತ್ರಿಕೆಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಯುವರಾಜ್ ಜೈನ್ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ