ವಿಜಯವಾಣಿ ಸುದ್ದಿಜಾಲ ಕಾಸರಗೋಡು ದೀರ್ಘ ಕಾಲದ ಕಾಯುವಿಕೆ ನಂತರ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಎಂಬಿಬಿಎಸ್ ತರಗತಿ ಆರಂಭಿಸಲು ಕೇಂದ್ರದ ಹಸಿರು ನಿಶಾನೆ ಲಭಿಸಿದೆ. ಕಾಸರಗೋಡು ಸೇರಿದಂತೆ ಕೇರಳದ ಎರಡು ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದನೆ ದೊರೆತಿದ್ದು, ಮೊದಲ ಬ್ಯಾಚ್‌ನ ತರಗತಿ ಸೆ.22ರಂದು ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 50 ಸೀಟುಗಳಿಗೆ ಪ್ರವೇಶಾತಿ ಲಭಿಸಲಿದೆ. ಪೂರ್ವ ನಿಗದಿಯಂತೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ತರಗತಿ ಆರಂಭಗೊಳ್ಳಲಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ 220 ಹಾಸಿಗೆಗಳ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶ ತಗುಲುವ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದೆ. ಹೊಸದಾಗಿ ಆರಂಭಗೊಳ್ಳುವ ಆಸ್ಪತ್ರೆಗೆ ಮೂರು ವರ್ಷಗಳ ಸೇವಾ ಅನುಭವ ಹೊಂದಿದ್ದಲ್ಲಿ ಮಾತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಅನುಮತಿ ಲಭ್ಯವಾಗುವುದಾಗಿ ಮಾನದಂಡವಿದೆ. ಮೊದಲ ವರ್ಷದ ಸಿಲೆಬಸ್ ಪ್ರಕಾರ ಥಿಯರಿ ತರಗತಿ ಆರಂಭಗೊಳ್ಳಲಿದೆ. ಕಾಸರಗೋಡು ವೈದ್ಯಕೀಯ ಕಾಲೇಜು ನಿರ್ಮಾಣ ಕಾರ್ಯಕ್ಕಾಗಿ ಕೆಐಐಎಫ್‌ಬಿ ನಿಧಿಯಿಂದ 160 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆಸ್ಪತ್ರೆ ಬ್ಲಾಕ್ ನಿರ್ಮಾಣ ಪ್ರಗತಿಯಲ್ಲಿದೆ. ಶೈಕ್ಷಣಿಕ ಬ್ಲಾಕ್ ಕಟ್ಟಡ ಈಗಾಗಲೇ ಪೂರ್ಣಗೊಂಡಿದ್ದು, ವೈದ್ಯಕೀಯ ಕಾಲೇಜಿಗೆ ನೀರು ಸರಬರಾಜು ವ್ಯವಸ್ಥೆಗೆ 8 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ನರವಿಜ್ಞಾನ ವಿಭಾಗ ಸೇರಿದಂತೆ ಹಂತ ಹಂತವಾಗಿ ವಿಶೇಷ ಸೇವೆ ಒದಗಿಸಲಾಗುತ್ತಿದೆ. 2013ರಲ್ಲಿ ಅಂದಿನ ಊಮನ್‌ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರ ಕಾಲಾವಧಿಯಲ್ಲಿ ಶಿಲಾನ್ಯಾಸ ನಡೆಸಲಾಗಿದ್ದು, ಮೂರು ವರ್ಷದಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಕಾಮಗಾರಿ 13 ವರ್ಷ ಸಮೀಪಿಸುತ್ತಿದ್ದರೂ ಪೂರ್ಣಗೊಳ್ಳದಿರುವ ಬಗ್ಗೆ ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರು, ಇತರ ರಾಜ್ಯಗಳನ್ನು ಆಶ್ರಯಿಸುತ್ತಿರುವ ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 60 ಸೀಟುಗಳೊಂದಿಗೆ ನರ್ಸಿಂಗ್ ಕಾಲೇಜು ಪ್ರಾರಂಭ 60 ಸೀಟುಗಳೊಂದಿಗೆ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗಿದೆ. 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹಾಸ್ಟೆಲ್ ನಿರ್ಮಾಣ ಅಂತಿಮ ಹಂತದಲ್ಲಿದೆ. 273 ಹುದ್ದೆಗಳನ್ನು ಸೃಷ್ಟಿಸಿ ಭರ್ತಿ ಮಾಡಲಾಗಿದೆ. ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ಪೆಥಾಲಜಿ, ನ್ಯೂರಾಲಜಿ, ನೆಫ್ರಾಲಜಿ, ಕಮ್ಯುನಿಟಿ ಮೆಡಿಸಿನ್, ಡರ್ಮಟಾಲಜಿ, ಇಎನ್‌ಟಿ, ರೆಸ್ಪಿರೇಟರಿ ವೈದ್ಯಕೀಯ ಸೇರಿದಂತೆ ವಿವಿಧ ವಿಭಾಗ ಆರಂಭಿಸಲಾಗಿದೆ. ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆ ಒದಗಿಸಲಾಗಿದೆ. ಈಗಾಗಲೇ ಪ್ರಾಂಶುಪಾಲರನ್ನು ನೇಮಿಸಲಾಗಿದೆ.
ವಯನಾಡ್, ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ದೊರೆತಿದೆ. 50 ಎಂಬಿಬಿಎಸ್ ಸೀಟು ಅನುಮೋದಿಸಲಾಗಿದ್ದು, ಎನ್‌ಎಂಸಿ ಮಾನದಂಡಗಳ ಪ್ರಕಾರ ಮೂಲ ಸೌಲಭ್ಯ, ಶೈಕ್ಷಣಿಕ ಸೌಲಭ್ಯ ಒದಗಿಸುವ ಮೂಲಕ ಅನುಮೋದನೆ ಪಡೆಯಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕಾರ್ಯ ವಿಧಾನ ಅನುಸರಿಸಿ ವಿದ್ಯಾರ್ಥಿಗಳನ್ನು ಪ್ರವೇಶಿಸಲು ಕ್ರಮ ಕೈಗೊಳ್ಳಲಾಗುವುದು. ವೀಣಾ ಜಾರ್ಜ್ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವೆ
ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಂದುವರಿಸಲು ತೀರ್ಮಾನ ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಮಾನದಂಡ ಪ್ರಕಾರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ರೀತಿಯಲ್ಲಿ ಆಸ್ಪತ್ರೆ ಕಟ್ಟಡ ಪೂರ್ಣ ಪ್ರಮಾಣದಲ್ಲಿ ತಲೆಯೆತ್ತಬೇಕಾದರೆ ಇನ್ನಷ್ಟು ಕಾಲಾವಕಾಶ ಬೇಕಾಗಿ ಬರಲಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಗೊಳ್ಳಬೇಕಾದರೆ ಮತ್ತೆ ಮೂರು ವರ್ಷ ಕಾಯಬೇಕು. ಈ ವಿಳಂಬ ತಪ್ಪಿಸಲು ಸರ್ಕಾರ ಕಾಸರಗೊಡು ಜನರಲ್ ಆಸ್ಪತ್ರೆಯನ್ನು ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆ ಭಾಗವಾಗಿ ಮುಂದುವರಿಸಿದ ನಂತರ ಉಕ್ಕಿನಡ್ಕದ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಅಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಂದುವರಿಸಲು ತೀರ್ಮಾನಿಸಿದೆ.