ಕೊಕ್ಕರ್ಣೆ: ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಸಂರಕ್ಷಿಸಿಕೊಳ್ಳಬೇಕು. ಲೌಕಿಕ ಶಕ್ತಿ ಮಾತ್ರವಲ್ಲದೇ ಧಾರ್ಮಿಕ ಶಕ್ತಿಯೂ ಅಗತ್ಯ. ಧಾರ್ಮಿಕತೆಯ ಆಚರಣೆಗಳ ಬಗ್ಗೆ, ಬ್ರಾಹ್ಮಣ್ಯ ಸಂರಕ್ಷಣೆ, ಐಕ್ಯಮತೆ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸೂರಾಲು ವಲಯ ವಿಪ್ರ ಟ್ರಸ್ಟ್ ಆಶ್ರಯದಲ್ಲಿ ಚೇರ್ಕಾಡಿ ಗ್ರಾಮ ಪೇತ್ರಿಯಲ್ಲಿ ನಿರ್ಮಾಣಗೊಂಡ ವಿಭುಶಂಕರ ಸಭಾಭವನವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಲ್ಲಿನ ಸಂಸ್ಕೃತಿ ದೇಶದ ಐಕ್ಯಮತ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ ಐಕ್ಯಮತ್ಯದ ಕೊರತೆ ಇದೆ. ನಮ್ಮ ಧರ್ಮವನ್ನು ನಾವು ಸಂರಕ್ಷಿಸಿ, ಗೌರವಿಸಬೇಕು. ಸರ್ವರೂ ಒಂದಾಗಬೇಕು ಎಂದರು. ಸೂರಾಲು ವಲಯ ವಿಪ್ರ ಟ್ರಸ್ಟ್ ಅಧ್ಯಕ್ಷ ಕೆ.ಮಂಜುನಾಥ್ ಹೆಬ್ಬಾರ್ ದಂಪತಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಸೂರಾಲು ವಲಯ ವಿಪ್ರ ಟ್ರಸ್ಟ್ ಸದಸ್ಯರು, ವಿಪ್ರ ಮಹಿಳಾ ಮಂಡಳಿ, ಸೂರಾಲು ವಲಯ ಬ್ರಾಹ್ಮಣ ಸಭಾ ಸದಸ್ಯರು ಉಪಸ್ಥಿತರಿದ್ದರು. ಸೂರಾಲು ದೇವಿಪ್ರಸಾದ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.