ಕಾರಟಗಿ: ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕಾರಟಗಿ ಸರ್ಕಾರಿ ನೌಕರರ ಖೋ ಖೋ ತಂಡದ ಆಟಗಾರರಿಗೆ ಜೆರ್ಸಿಗಳನ್ನು ಪಟ್ಟಣದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ವಿತರಿಸಲಾಯಿತು.
ಇದನ್ನೂ ಓದಿ: ಬಡವರಿಗೆ ವರದಾನವಾದ ಸರ್ಕಾರಿ ಆಸ್ಪತ್ರೆಗಳು
ತಾಲೂಕು ಅಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ, ತಾಲೂಕಿನ ನೌಕರರ ಸಂಘದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಜಿಲ್ಲಾಮಟ್ಟದಲ್ಲಿ ಖೋಖೋ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಜಯ ಸಾಧಿಸಿದ್ದಾರೆ. ಮೇ 18, 19 ಮತ್ತು 20ರಂದು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಮಟ್ಟದಲ್ಲೂ ಸಹ ಗೆದ್ದು ತಾಲೂಕಿನ ಕೀರ್ತಿ ಹೆಚ್ಚಿಸಲಿ ಎಂದರು.
ಜಂಟಿ ಕಾರ್ಯದರ್ಶಿಗಳಾದ ಶರಣಪ್ಪ ಮತ್ತು ಬಸವರಾಜ ಪುಲದಿನ್ನಿ, ಸಂಘಟನಾ ಕಾರ್ಯದರ್ಶಿ ಮಲ್ಲೇಶ ನಾಯಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶಿವರಾಜ ಕುಮಾರ್ ಮತ್ತು ಗಾಯತ್ರಿ, ಕ್ರೀಡಾ ಕಾರ್ಯದರ್ಶಿ ಶರಣೇಗೌಡ, ಆಂತರಿಕ ಲೆಕ್ಕ ಪರಿಶೋಧಕ ಶಂಕ್ರಪ್ಪ, ನಿರ್ದೇಶಕ ಮಂಜುನಾಥ್ ಇತರರಿದ್ದರು.