ಕುಂದಾಪುರ: ಮಾತೆ ಮೇರಿಯ ಹುಟ್ಟು ಹಬ್ಬ ಮೊಂತಿ ಫೆಸ್ಟ್‌ನ್ನು ಕುಂದಾಪುರದ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯಲ್ಲಿ ವಿಜೃಂಭಣೆಯಿಂದ ಸೋಮವಾರ ಆಚರಿಸಲಾಯಿತು.
ಧರ್ಮಗುರು ಸ್ಟೀವನ್ ಫರ್ನಾಂಡಿಸ್, ಚರ್ಚಿನ ಧರ್ಮಗುರು ಪಾವ್ಲ್ ರೇಗೊ ಮತ್ತು ಧರ್ಮಗುರು ನೊವೆಲ್ ಒಲಿವೆರಾ ದಿವ್ಯ ಬಲಿದಾನ ಅರ್ಪಿಸಿ ಮಾತನಾಡಿ, ಹೆಣ್ಣು ಮಕ್ಕಳು ಮೇರಿ ಮಾತೆಯ ಆದರ್ಶವನ್ನು ಪಾಲಿಸಬೇಕು. ಈ ಹಬ್ಬವನ್ನು ಪ್ರಕೃತಿಯ ಹಬ್ಬವೆಂದು ಆಚರಿಸುತ್ತೇವೆ, ಅದಕ್ಕಾಗಿ ಹೊಸ ಬೆಳೆಯನ್ನು ನೀಡಿದಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ನೀಡಿ, ಅದನ್ನು ಭಕ್ತಿಪೂರ್ವಕವಾಗಿ ಪೂಜಿಸಿ, ಭಜಿಸುತ್ತೇವೆ. ಪ್ರಕೃತಿಯನ್ನು ದೇವರು ನಮಗೆ ನೀಡಿದ್ದಾನೆ, ಆದರೆ ಅದನ್ನು ನಾಶ ಮಾಡಬಾರದು, ಸಂರಕ್ಷಿಸಬೇಕು ಎಂದು ಸಂದೇಶ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಯುವ ಸಂಘಟನೆಗಳ ನಿರ್ದೇಶಕ ಧರ್ಮಗುರು ಸ್ಟೀವನ್ ಫರ್ನಾಂಡಿಸ್ ನೇತೃತ್ವದಲ್ಲಿ ಹೊಸ ಬೆಳೆ ಭತ್ತದ ತೆನೆಗಳನ್ನು ಪೂಜಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬಳಿಕ ಅಲಂಕೃತ ಬಾಲ ಮೇರಿ ಮಾತೆಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು.
ಎಲ್ಲ ಕುಟುಂಬದವರಿಗೆ ಹೊಸ ತೆನೆಗಳನ್ನು ಹಾಗೂ ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಭಕ್ತರು ಹಾಜರಿದ್ದರು.