ಪುತ್ತೂರು (ದ.ಕ): ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದ ನಂತರದ ಬೆಳವಣಿಗೆಯಲ್ಲಿ ಹಿಂದು ಸಂಘಟನೆ ಮತ್ತು ಬಿಜೆಪಿ ನಡುವಿನ ಮುಸುಕಿನ ಗುದ್ದಾಟ ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಫಲವಾಗಿದ್ದ ಆರ್ಎಸ್ಎಸ್, ಇದೀಗ ಪುತ್ತೂರಿನಲ್ಲೇ ಮೂರು ದಿನಗಳ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಆರಂಭಿಸಿದೆ.
ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶ ನಿಯಂತ್ರಣ ಒಂದೆಡೆಯಾದರೆ, ಕರಾವಳಿಯಲ್ಲಿ ಬಿಜೆಪಿಯನ್ನು ಸಂಪೂರ್ಣ ಹಿಡಿತದಲ್ಲಿಡುವುದು ಈ ಬೈಠಕ್ನ ಪ್ರಮುಖ ಉದ್ದೇಶ ಎಂದೇ ವಿಶ್ಲೇಷಿಸಲಾಗಿದೆ. ವಿವೇಕಾನಂದ ಪದವಿ ಕಾಲೇಜಿನಲ್ಲಿ ಶುಕ್ರವಾರ ಆರಂಭಗೊಂಡ ಬೈಠಕ್ ಸಹ ಸರಕಾರ್ಯವಾಹ ಮುಕುಂದ ನೇತೃತ್ವದಲ್ಲಿ 28ರವರೆಗೆ ಜರುಗಲಿದೆ. ಆರ್ಎಸ್ಎಸ್ ಮತ್ತು ಪರಿವಾರ ಸಂಘಟನೆಗಳ ವಿಚಾರದಲ್ಲಿ ಚರ್ಚೆ ನಡೆಸಲು ಈ ಬೈಠಕ್ ಆಯೋಜಿಸಿದ್ದರೂ, ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಕಾರಣ ವಿಶೇಷ ಮಹತ್ವವನ್ನೂ ಪಡೆದುಕೊಂಡಿದೆ. ಈ ಮೂರು ದಿನಗಳ ಬೈಠಕ್ನಲ್ಲಿ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ಕ್ಷೇತ್ರೀಯ ಪ್ರಚಾರಕ ಸುಧೀರ್, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಮೊದಲಾದ ಪ್ರಮುಖರು ಭಾಗವಹಿಸಲಿದ್ದಾರೆ. ಆರ್ಎಸ್ಎಸ್ ಅಖಿಲ ಭಾರತ ಪ್ರತಿನಿಧಿ ಸಭಾದ ಪ್ರಮುಖರೂ ಸೇರಿ 800 ಅಪೇಕ್ಷಿತರು ಆಗಮಿಸಲಿದ್ದಾರೆ.
ಇಂದು ಸಮನ್ವಯ ಬೈಠಕ್: ಆ.27ರಂದು ಆರ್ಎಸ್ಎಸ್ ಮತ್ತು ಬಿಜೆಪಿ ಸಮನ್ವಯ ಬೈಠಕ್ ಜರುಲಿದ್ದು. ಇದು ಈ ಬೈಠಕ್ನ ಕೇಂದ್ರಬಿಂದು. ಬಿಜೆಪಿ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ನಂತರ ಬಿಜೆಪಿ ನಾಯಕರು ಮತ್ತು ಹಿಂದು ಸಂಘಟನೆಗಳ ಮಧ್ಯೆ ಅಂತರ ಸೃಷ್ಟಿಯಾಗಿದೆ. ಹಿಂದು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ನಡೆಯುತ್ತಿವೆ. ಈ ವಿಚಾರದಲ್ಲಿ ಸಂಘ ಪರಿವಾರದ ನಾಯಕರು, ಹಿಂದು ಕಾರ್ಯಕರ್ತರ ಜತೆ ಪುತ್ತೂರು ಸಹಿತ ವಿವಿಧ ತಾಲೂಕುಗಳಲ್ಲಿ ಚರ್ಚೆ ನಡೆಸಿದ್ದಾರೆ. ಬಹುತೇಕ ಚರ್ಚೆಗಳಲ್ಲಿ ಅಧಿಕಾರ ಅನುಭವಿಸುವ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಾರ್ಯಕರ್ತರ ಓಟು ಪಡೆದು ಅಧಿಕಾರ ಅನುಭವಿಸುವ ಬಿಜೆಪಿ ನಾಯಕರನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಸುವಷ್ಟರ ಮಟ್ಟಿನ ಕೋಪ ವ್ಯಕ್ತವಾಗಿತ್ತು. ಬಿಜೆಪಿ ಮತ್ತು ಹಿಂದು ಸಂಘಟನೆಗಳ ನಡುವಿನ ಈ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತೆರೆ ಎಳೆಯುವ ಉದ್ದೇಶದಿಂದಲೇ ಈ ಸಮನ್ವಯ ಬೈಠಕ್ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಪ್ರಾಂತದ ಜವಾಬ್ದಾರಿ ಬದಲಾವಣೆ: ಮುಂದೆ ರಾಜ್ಯ ಬಿಜೆಪಿಯಲ್ಲೂ ಹೊಸ ತಂಡ ರಚನೆಗೊಳ್ಳಲಿದೆ. ಕೊನೆಯ ದಿನದ ಬೈಠಕ್ನಲ್ಲಿ (ಆ.28) ಬಿಜೆಪಿಯನ್ನು ನಿಯಂತ್ರಿಸುವ ಉದ್ದೇಶದಿಂದ ಆರ್ಎಸ್ಎಸ್ ದಕ್ಷಿಣ ಪ್ರಾಂತದ ಜವಾಬ್ದಾರಿಗಳೂ ಬದಲಾಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರ ಅನುಭವಿಸುತ್ತಿರುವ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಳ್ಳಲು ಸಮನ್ವಯ ಬೈಠಕ್ನಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ. ಬೈಠಕ್ನಲ್ಲಿ ಸಂಘದ ಕಾರ್ಯಚಟುವಟಿಕೆ ಹಾಗೂ ಬಿಜೆಪಿ ನಡೆ ಬಗ್ಗೆ ಚರ್ಚೆ ಸಾಧ್ಯತೆಯಿದೆ. ಕಾರ್ಯಕರ್ತರ ಹತ್ಯೆಗಳಿಗೆ ಕಡಿವಾಣ ಹಾಕುವ ವಿಷಯದಲ್ಲಿಯೂ ಬಿಜೆಪಿಗೆ ಆರ್ಎಸ್ಎಸ್ ಬಿಸಿ ಮುಟ್ಟಿಸುವ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ.