ಜಿಲ್ಲೆ

ಮಕ್ಕಳಿಗೆ ದೊರೆಯಲಿ ಸಾಮಾನ್ಯಜ್ಞಾನ : ಗಿರಿಶಂಕರ ಸುಲಾಯ ಬಣ್ಣನೆ

ಸೌಮ್ಯ ಆರ್

ಕಡಬ: ಶಾಲೆಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ದೊರೆಯಬೇಕು. ಮಾರುಕಟ್ಟೆ ಬಗ್ಗೆ ತಿಳಿಯುವುದು, ವ್ಯಾಪಾರ ವಹಿವಾಟು ಪಠ್ಯಕ್ಕೆ ಹೇಗೆ ಅನುಕೂಲವಾಗುತ್ತದೆ ಎಂಬುವುದನ್ನು ತಿಳಿಸುವುದೇ ಮೆಟ್ರಿಕ್ ಮೇಳದ ಮುಖ್ಯ ಉದ್ದೇಶ ಎಂದು ಸವಣೂರು ಗ್ರಾಪಂ ಸದಸ್ಯ ಗಿರಿಶಂಕರ ಸುಲಾಯ ಹೇಳಿದರು.

ಮಂಗಳವಾರ ಬೊಬ್ಬೆಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್‌ಮೇಳ ಮಕ್ಕಳ ಮಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಯಶೋದಾ ಶುಭ ಹಾರೈಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್, ಕಾಣಿಯೂರು ಗ್ರಾ ಪಂ ಸದಸ್ಯರಾದ ಸುನಂದಾ ಅಬ್ಬಡ, ಲಲಿತಾ ದರ್ಖಾಸು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗಣೇಶ್ ಉದನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ನಿರ್ದೇಶಕರಾದ ವಿಶ್ವನಾಥ ದೇವಿನಗರ, ಲೋಕೇಶ್ ಅತಾಜೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಎಸ್‌ಡಿಎಂಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ ಹಾಗೂ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಶಶಿಕಲಾ ಸ್ವಾಗತಿಸಿದರು. ಶಿಕ್ಷಕ ಜನಾರ್ದನ ಹೇಮಳ ವಂದಿಸಿದರು.

ಮನೆಯಿಂದ ತರಲಾದ ಉತ್ಪನ್ನ ಮಾರಾಟ

ವಿದ್ಯಾರ್ಥಿಗಳು ಮನೆಯಿಂದ ತಂದ ಚೀನಿಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಪಡುವಲಕಾಯಿ, ಬಾಳೆಹಣ್ಣು, ಹರಿವೆ ಸೊಪ್ಪು, ಹಸಿಮೆಣಸು, ಟೊಮೆಟೊ, ಸಿಹಿಗೆಣಸು, ಬಸಳೆ, ಎಳನೀರು, ವೀಳ್ಯದೆಲೆ, ಅಲಸಂಡೆ, ತೆಂಗಿನಕಾಯಿ, ಸೀಬೆಕಾಯಿ, ಪರಂಗಿಹಣ್ಣು, ದ್ರಾಕ್ಷಿ, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ, ಔಷಧ ಸಸ್ಯ, ಹೂವಿನ ಗಿಡ, ಬಾಳೆ ಹೂ, ನರ್ಸರಿ ಹೂ, ಮಜ್ಜಿಗೆ, ಸೋಪು, ಮಸಾಲಪುರಿ, ಪಾನಿಪುರಿ, ಹಾರೆ, ತಿಮರೆ, ತಾಜಾ ಹಣ್ಣಿನ ಜ್ಯೂಸ್, ತರಕಾರಿಗಳು, ಹಣ್ಣಿನ ಗಿಡಗಳು, ಮನೆಯಲ್ಲಿ ತಯಾರಿಸಿದ ತಿಂಡಿ, ಉಪ್ಪಿನಕಾಯಿ ಸಂತೆಯಲ್ಲಿ ಲಭ್ಯವಿದ್ದವು.