ಜಿಲ್ಲೆ

ಕಲ್ಯಾಣ ಕಾರ್ಯ ಮಾಡದ ಕಾಂಗ್ರೆಸ್ ಪಕ್ಷ: ಸಚಿವ ಹಾಲಪ್ಪ ಆಚಾರ್

ಪ್ರವೀಣ ಉದುಸಾ ದಲಬಂಜನ್

ಯಲಬುರ್ಗಾ: ನನ್ನ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ, ಮಂತ್ರಿಯಾಗಿ ಅವಳಿ ತಾಲೂಕಿನಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದು, ಗ್ರಾಮೀಣ ಭಾಗದ ಒಳ ರಸ್ತೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಕಾಂಗ್ರೆಸ್ಗೆ ಜನಪರ ಕಾಳಜಿಯಿಲ್ಲ

ಕ್ಷೇತ್ರದಲ್ಲಿ ಕೆರೆಗಳ ಜೀರ್ಣೋದ್ಧಾರ, ಚೆಕ್‌ಡ್ಯಾಮ್ ನಿರ್ಮಾಣ, ಶಾಲಾ ಕೊಠಡಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಜನಪರ ಕಾಳಜಿ ಇಲ್ಲದ ಕಾಂಗ್ರೆಸ್‌ನವರು ಇಂಥ ಕಲ್ಯಾಣ ಕಾರ್ಯ ಮಾಡಲಿಲ್ಲ. ಮಾಡಿದ ಕೆಲಸವನ್ನು ನಾವು ಮಾಡಿದ್ದೇವೆ, ಮಾಡುತ್ತೇವೆಂದು ಜನರ ಮುಂದೆ ಯಾವ ಮುಖ ಇಟ್ಟುಕೊಂಡು ಬರುತ್ತಾರೆ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುವ ಮೂಲಕ ನಾಡಿನ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.


ಬಿಜೆಪಿ ಮುಖಂಡ ಅರವಿಂದಗೌಡ ಪಾಟೀಲ್ ಮಾತನಾಡಿದರು. ಬಳಿಕ ಗುನ್ನಾಳ, ಉಚ್ಚಲಕುಂಟಾ, ನಿಲೋಗಲ್, ಯಾಪಲದಿನ್ನಿ ಗ್ರಾಮಗಳಲ್ಲಿ ಮತಯಾಚರಿಸಲಾಯಿತು. ಪ್ರಮುಖರಾದ ಸಿ.ಎಚ್.ಪಾಟೀಲ್, ಮಲ್ಲಣ್ಣ ಹರ್ಲಾಪುರ, ಮುತ್ತನಗೌಡ ಗೌಡ್ರ, ಶಿವಪ್ಪ ವಾದಿ, ಶಂಕ್ರಪ್ಪ ಸುರಪುರ ಇತರರಿದ್ದರು.