ಕಾಂಗ್ರೆಸ್‌ನಿಂದ ಇಲ್ಲಸಲ್ಲದ ಆರೋಪ- ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಅಸಮಾಧಾನ

Hospete Siddarth Singh Campaign 02
ಹೊಸಪೇಟೆಯ 22ನೇ ವಾರ್ಡಿನ ಮೆಹಬೂಬ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಮತ ಕೋರಿದರು.
Published on

ಹೊಸಪೇಟೆ: ವಿಜಯನಗರ ಕ್ಷೇತ್ರದ ಅಭಿವೃಧ್ಧಿ ವಿಚಾರದಲ್ಲಿ ವಿಪಕ್ಷಗಳಿಗೆ ಆರೋಪ ಮಾಡಲು ವಿಷಯಗಳೇ ಸಿಗುತ್ತಿಲ್ಲ. ಆದರೂ, ಕಾಂಗ್ರೆಸ್ ಮುಖಂಡರು ದಾಖಲೆಗಳನ್ನು ಕೂಲಂಕಷ ಪರಿಶೀಲಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸಿರಸನಕಲ್ ಹಾಗೂ ಗುರುಭವನ ಪ್ರದೇಶದಲ್ಲಿ ಗುರುವಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಈವರೆಗೆ ವಿತರಿಸಿರುವ ಆಶ್ರಯ ಮತ್ತು ಪಟ್ಟಾ ಮನೆಗಳ ದಾಖಲೆ ಅಸಲಿಯಾಗಿವೆ.

ಸರ್ಕಾರ ಮಟ್ಟದಲ್ಲಿ ಸಾಮಾನ್ಯ ಜನರಿಗೆ, ಮತದಾರರಿಗೆ ಮೋಸ ಮಾಡುವಂಥ ಸಣ್ಣ ಮಟ್ಟದ ಆಲೋಚನೆ ನಮ್ಮಲಿಲ್ಲ. ಆದರೂ, ಕಾಂಗ್ರೆಸ್ ಮುಖಂಡರು ಆ ಬಗ್ಗೆ ವಿನಾಕಾರಣ ದಾಖಲೆಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೆಲವರಿಗೆ ಸಾಂಕೇತಿಕವಾಗಿ ಮನೆಯ ಹಕ್ಕು ಪತ್ರ ವಿತರಿಸಲಾಗಿದೆ. ಚುನಾವಣೆ ಬಳಿಕ ಫಲಾನುಭವಿಗಳ ಮನೆ ಮನೆಗೆ ಹಕ್ಕು ಪತ್ರಗಳನ್ನು ತಲುಪಿಸಲಾಗುವುದು ಎಂದರು.

ಮುಖಂಡ ಟಿಂಕರ್ ರಫಿಕ್ ಮಾತನಾಡಿ, ನಮ್ಮ ಸಮುದಾಯದ ಅನೇಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಚಿವ ಆನಂದಸಿಂಗ್ ಸಹಾಯ ಮಾಡಿದ್ದಾರೆ. ಅದನ್ನು ನಾವು ಯಾವತ್ತೂ ಮರೆಯಬಾರದು. 30 ವರ್ಷಗಳಿಂದ ಆಗದ ಅಭಿವೃದ್ಧಿ ಕಾರ್ಯಗಳನ್ನು ಆನಂದ್ ಸಿಂಗ್ ಅವರ ಅವಧಿಯಲ್ಲಾಗಿವೆ ಎಂದರು.

ನಗರಸಭೆ ಸದಸ್ಯ ದ್ವಾರಕೇಶ್, ಕಸಾಟಿ ಉಮಾಪತಿ, ಆನಂದ್ ಸಿಂಗ್ ಸಹೋದರ ಈಶ್ವರ ಸಿಂಗ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net