ಕುಂಟ್ಯಾನ ಸದಾಶಿವ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಸತ್ತ ಶ್ವಾನಗಳ ಕೊಳೆತ ದೇಹಗಳು ಗೋಣಿಯಲ್ಲಿ ತುಂಬಿಸಿಟ್ಟ ಮತ್ತು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ ಜಯ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ ಗೌಡ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಜಿಲ್ಲೆ

ಸಾಕುನಾಯಿಗಳ ಸಾಮೂಹಿಕ ಹತ್ಯೆ?

Avinash R

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಬನ್ನೂರು ಗ್ರಾಮದ ಕುಂಟ್ಯಾನ ಸದಾಶಿವ ದೇವಸ್ಥಾನಕ್ಕೆ ಹೋಗುವ ಕುಂಟ್ಯಾನ- ಅಡೆಂಚಿಲಡ್ಕ ರಸ್ತೆ ಬದಿ ಸತ್ತ ಶ್ವಾನಗಳ ಕೊಳೆತ ದೇಹಗಳು ಗೋಣಿಯಲ್ಲಿ ತುಂಬಿಸಿಟ್ಟ ಮತ್ತು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕಮಿಗಳು ಶ್ವಾನಗಳಿಗೆ ವಿಷವುಣಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಈ ಪರಿಸರದ 20ಕ್ಕೂ ಅಧಿಕ ಸಾಕುನಾಯಿಗಳು ಕಳೆದ ಕೆಲದಿನಗಳಿಂದ ನಾಪತ್ತೆಯಾಗಿದ್ದವು.

ಅಡೆಂಚಿಲಡ್ಕದ ಅಣ್ಣು, ಯಮುನಾ ಎಂಬುವರ ಸಾಕು ನಾಯಿಗಳು ಹಾಗೂ ಸದಾಶಿವ ಕಾಲನಿಯ ಕೆಲ ಸತ್ತ ಶ್ವಾನಗಳ ದೇಹಗಳು ರಸ್ತೆ ಬದಿಯ ಪೊದೆಗಳಲ್ಲಿ ಪತ್ತೆಯಾಗಿವೆ. ರಸ್ತೆ ಬದಿ ವಾಸನೆ ಗಮನಿಸಿದ ಗ್ರಾಮಸ್ಥರು ಪೊದೆಗಳ ಬಳಿ ಪರಿಶೀಲಿಸಿದಾಗ ಕೊಳೆತ ದೇಹಗಳು ಪತ್ತೆಯಾಗಿವೆ. ಬನ್ನೂರು ಗ್ರಾಪಂ ಅಧ್ಯಕ್ಷೆ ಜಯ ಮತ್ತು ಸದಸ್ಯರು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಪಂ ನೀಡಿದ ಮಾಹಿತಿಯನ್ವಯ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬಪ್ಪಳಿಗೆಯಲ್ಲೂ ನಾಯಿಗಳ ಹತ್ಯೆ

ಬಪ್ಪಳಿಗೆಯಲ್ಲಿ ಕಳೆದ ಕೆಲದಿನಗಳ ಹಿಂದೆ ಮೂರು ಶ್ವಾನಗಳಿಗೆ ಆಹಾರದ ಜತೆ ಗಾಜಿನ ಚೂರು ಬೆರಸಿ ಹತ್ಯೆ ಮಾಡಲಾಗಿತ್ತು. ಒಂದು ವಾರಗಳ ಕಾಲ ಈ ಶ್ವಾನಗಳು ರಸ್ತೆ ಬದಿ ನರಳಿ ಪ್ರಾಣ ಬಿಟ್ಟಿದ್ದವು. ಜೀವನ್ಮರಣ ಹೋರಾಟದಲ್ಲಿದ್ದ ಶ್ವಾನಗಳನ್ನು ಬದುಕಿಸಲು ಪ್ರಯತ್ನಿಸಿದ್ದ ಅಲ್ಲಿನ ಯುವಕನೊಬ್ಬ ಶ್ವಾನಗಳ ಹಿಂಸಾತ್ಮಕ ಸಾವಿಗೆ ಕಾರಣವಾದ ದುಷ್ಕರ್ಮಿಗಳಿಗೆ ತಕ್ಕ ಶಾಸ್ತಿಯಾಗುವಂತೆ ದೈವಗಳ ಮೊರೆ ಹೊಗಿದ್ದ ಘಟನೆಯೂ ನಡೆದಿತ್ತು.

ಎಸಿಗೆ ದೂರು

ಅಡೆಂಚಿನಡ್ಕ -ಕುಂಟ್ಯಾನ ಸದಾಶಿವ ಕಾಲನಿ ಪರಿಸರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಶ್ವಾನಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಾಮೂಹಿಕ ಹತ್ಯೆಗೆ ಕಾರಣರಾದ ಪಾತಕಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರಿನ ಉಪವಿಭಾಗಾಧಿಕಾರಿಗೆ ದೂರು ನೀಡಲಾಗಿದೆ.
ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತು ನರಿಮೊಗರು ಗ್ರಾಮದ ಗೌರಿಕಿರಣ ನಿವಾಸಿ ಶಶಿಧರ್ ವಿ.ಎನ್ ಅವರು ಮಂಗಳವಾರ ಈ ಕುರಿತು ಎಸಿಗೆ ದೂರು ನೀಡಿದ್ದಾರೆ. ಈ ಶ್ವಾನಗಳ ವಧೆಯ ಹಿಂದೆ ಯಾವುದೋ ಸಮಾಜಘಾತಕ ಶಕ್ತಿಗಳ ಕೃತ್ಯಇರಬಹುದು, ಇಲ್ಲವೇ ವಿಷಪ್ರಾಶನ ಮಾಡಿಸಿ ಸಾಮೂಹಿಕ ಹತ್ಯೆಗೆ ಯೋಜನೆ ರೂಪಿಸಿರಬಹುದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸತ್ತ ಶ್ವಾನಗಳ ದೇಹಗಳು ಏಕಾಏಕಿ ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ. ರೋಗ ಬಾಧೆಯೋ ಅಥವಾ ವಿಷವುಣಿಸಿ ಸಾಯಿಸಿದ್ದಾರೆಯೋ? ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಗ್ರಾಮಸ್ಥರು ಪಂಚಾಯಿತಿ ಮತ್ತು ಪಶು ಇಲಾಖೆಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು.-ರತ್ನಾಕರ ಪ್ರಭುಬನ್ನೂರು ಗ್ರಾಪಂ ಮಾಜಿ ಸದಸ್ಯ
ಶ್ವಾನಗಳ ಕೊಳೆತ ದೇಹಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದೇವೆ. ಎರಡು ಶ್ವಾನಗಳ ದೇಹಗಳು ಸಿಕ್ಕಿದ್ದು, ಅವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದುದರಿಂದ ಮರಣೋತ್ತರ ಪರೀಕ್ಷೆ ಅಸಾಧ್ಯ. ಮುಂದೆಯೂ ಪರಿಸರದಲ್ಲಿ ಸತ್ತ ಶ್ವಾನಗಳ ದೇಹಗಳು ಪತ್ತೆಯಾದರೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ತಿಳಿಸಿದ್ದೇವೆ.-ಡಾ.ಧರ್ಮಪಾಲ ಗೌಡಪಶು ಇಲಾಖೆಯ ಸಹಾಯಕ ನಿರ್ದೇಶಕ