ಪಡುಬಿದ್ರಿ: ಅಪ್ರಾಪ್ತ ವಯಸ್ಸಿನ ಯುವತಿಯನ್ನು ಮದುವೆಯಾಗಿ ಮಗುವಿನ ಜನ್ಮಕ್ಕೆ ಕಾರಣನಾದ ಪತಿ ಮತ್ತು ಆತನ ಮನೆಯವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಹಾರ ಮೂಲದ ಚಾಂದನಿ ಕಾತೂನ್ ದೂರುದಾರ ಮಹಿಳೆಯಾಗಿದ್ದು, ಆಕೆ ತನ್ನನ್ನು ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿದ್ದ ಪತಿ ಇಮ್ತಿಯಾಜ್ ದೇವನ್ ಹಾಗೂ ಮದುವೆಗೆ ಕಾರಣರಾಗಿದ್ದ ತನ್ನ ತಂದೆ ಮೊಹಮ್ಮದ್ ತಯ್ಯಬ್ ರಾಯಿನ್ ಮತ್ತು ತಾಯಿ ಜುಲೇಖಾ ಖಾತೂನ್ ವಿರುದ್ಧ ದೂರು ನೀಡಿದ್ದಾರೆ.
ಚಾಂದನಿ ಕಾತೂನ್‌ಗೆ 16 ವರ್ಷ ತುಂಬಿದ್ದ ವೇಳೆ 2022 ಜೂನ್ 12ರಂದು ಇಮ್ತಿಯಾಜ್ ದೇವನ್ ಎಂಬಾತನೊಂದಿಗೆ ಪಾಲಕರು ವಿವಾಹ ಮಾಡಿಕೊಟ್ಟಿದ್ದು, ವಿವಾಹದ ನಂತರ ಪತಿಯ ಮನೆಯಲ್ಲಿ ವಾಸವಿದ್ದರು. ಆ ಬಳಿಕ 2023 ಏ.4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಸ್ತುತ ಮಗುವಿಗೆ 1 ವರ್ಷ 3 ತಿಂಗಳು ಆಗಿದೆ. ಬಳಿಕ ಮಗುವಿನೊಂದಿಗೆ ದಂಪತಿ ಉದ್ಯಾವರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದು, ಈ ವೇಳೆ ಚಾಂದನಿ ಕಾತೂನ್ ಮತ್ತೆ ಗರ್ಭಿಣಿಯಾಗಿದ್ದರು. ಏಳು ತಿಂಗಳ ಗರ್ಭಿಣಿಗೆ ಜುಲೈ 13ರಂದು ಹೊಟ್ಟೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ವೇಳೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.