ಗಂಗೊಳ್ಳಿ: ಒಂದು ಸಮುದಾಯ ಪ್ರಗತಿ ಸಾಧಿಸಬೇಕಾದರೆ ಅದರಲ್ಲಿ ವಿದ್ಯಾವಂತರ ಮತ್ತು ಉದ್ಯೋಗಿಗಳ ಸಂಖ್ಯೆ ಹೆಚ್ಚಬೇಕು. ಹಾಗಾಗಿ ಸಾಮುದಾಯಿಕ ಸಂಘಟನೆ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಬೇಕು ಎಂದು ನಾವುಂದ ಗ್ರಾಪಂ ಅಧ್ಯಕ್ಷ ಎನ್.ನರಸಿಂಹ ದೇವಾಡಿಗ ಹೇಳಿದರು.
ಮರವಂತೆ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ಮರವಂತೆ ದೇವಾಡಿಗರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಗೋಪಾಲ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ಧರ್ಮದರ್ಶಿ ತಿಮ್ಮ ದೇವಾಡಿಗ ಶುಭ ಹಾರೈಸಿದರು. ಗೌರವಾಧ್ಯಕ್ಷ ನಾರಾಯಣ ದೇವಾಡಿಗ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಲಹೆಗಾರ ಹೆರಿಯ ದೇವಾಡಿಗ ಸ್ವಾಗತಿಸಿ, ಕಾರ್ಯದರ್ಶಿ ಹರೀಶ ದೇವಾಡಿಗ ವರದಿ ಓದಿದರು. ಕೋಶಾಧಿಕಾರಿ ಗಿರೀಶ್ ದೇವಾಡಿಗ ವಂದಿಸಿದರು. ಜತೆಕಾರ್ಯದರ್ಶಿ ಸುಬ್ಬಯ್ಯ ದೇವಾಡಿಗ ನಿರೂಪಿಸಿದರು.
ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಶಿಷ್ಯವೇತನ ವಿತರಣೆ ನಡೆಯಿತು. ಗ್ರಾಮ ವ್ಯಾಪ್ತಿಯ ಆರು ಆಶಾ ಕಾರ್ಯಕರ್ತರನ್ನು ಮತ್ತು ಇಬ್ಬರು ಪವರ್‌ಮನ್‌ರನ್ನು ಗೌರವಿಸಲಾಯಿತು. ಸಂಘದ ವಿದ್ಯಾನಿಧಿ ಸಂಗ್ರಹಕ್ಕಾಗಿ ನಡೆಸಿದ್ದ ಲಕ್ಕಿಡಿಪ್‌ನ ಅದೃಷ್ಟಶಾಲಿ ದಾನಿಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಯಿತು.