ರಾಯಚೂರು: ಯಾವ ಧರ್ಮದಲ್ಲಿ ದೇವರ ಧ್ಯಾನ ಮಾಡಿದರೆ ಬಡತನ ನೀಗುತ್ತದೆ ಎಂದು ಎಲ್ಲಿ ನಮೂದಾಗಿದೆ ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.
ನಗರದ ಮುಂಗ್ಲೀಪ್ರಾಣ ದೇವರ ದೇವಸ್ಥಾನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರೀವೇಣಿ ಸಂಗಮ ಕುಂಭಮೇಳದಲ್ಲಿ ಮಿಂದೆಳುವುದರಿಂದ ಹಸಿವು ನೀಗುತ್ತದೆಯೇ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.
ಯಾವ ಧರ್ಮದಲ್ಲೂ ಬಡತನ ನಿವಾರಣೆಗೆ ಪೂಜೆ, ಪ್ರಾರ್ಥನೆ, ಸುವಾರ್ತೆ ಕೂಟಗಳಲ್ಲಿ ಪರಿಹಾರವಿಲ್ಲ. ಕುಂಭಮೇಳ ಭಾರತೀಯರ ಶ್ರದ್ಧಾ ಉತ್ಸವವಾಗಿದೆ. ಕುಂಭಮೇಳದ ಸ್ನಾನ, ಸೂರ್ಯ ನಮಸ್ಕಾರದಿಂದ ಒಳ್ಳೆಯದಾಗುವ ಬಲವಾದ ನಂಬಿಕೆಯಿದೆ. ಅದನ್ನು ಘಾಸಿಗೊಳಿಸುವ, ಶ್ರದ್ಧಾ ಭಕ್ತಿಗೆ ಅತಂಕ ತರುವ ಕೆಲಸ ಯಾರೂ ಮಾಡಬಾರದೆಂದು ಹೇಳಿದ್ದಾರೆ. ಸನಾತನ ಹಿಂದೂ ಧರ್ಮವನ್ನು ಟೀಕಿಸುವುದೇ ವೃತ್ತಿಯಾಗಿಸಿಕೊಂಡ ರಾಜಕೀಯದವರು ಜನರ ನಂಬಿಕೆಗಳಿಗೆ ಧಕ್ಕೆಯಾಗುವ ರೀತಿ ಹೇಳಿಕೆ ನೀಡುವುದು ತರವಲ್ಲ. ಯಾರು ಎಲ್ಲಿಯೂ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರೆ ಬಡತನ ನಿವಾರಣೆಯಾಗುತ್ತದೆಂದು ಹೇಳಿಲ್ಲ.
ಮಹಾಕುಂಭಮೇಳವು ಭಾರತೀಯರ ಶ್ರದ್ಧಾ ಉತ್ಸವವಾಗಿದೆ. ಕುಂಭಮೇಳದ ಸ್ನಾನ, ಸೂರ್ಯ ನಮಸ್ಕಾರ ದಿಂದ ಒಳ್ಳೆಯದಾಗುವ ಬಲವಾದ ನಂಬಿಕೆ ಹಿಂದುಗಳಲ್ಲಿದೆ. ಅದಕ್ಕೆ ಘಾಸಿಗೊಳಿಸುವ, ಶ್ರದ್ಧಾ ಭಕ್ತಿಗೆ ಧಕ್ಕೆ ಉಂಟು ಮಾಡುವ ಯಾವುದೇ ಹೇಳಿಕೆ ಯಾರೂ ನೀಡಬಾರದು. ಮೌನಿ ಅಮಾವಾಸ್ಯೆ ನಿಮಿತ್ತ ಪ್ರಯಾಗ್‌ರಾಜ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದು ಕಾಲ್ತುಳಿತವಾಗಿದೆ. ಇದು ಆಗಬಾರದಿತ್ತು. ಉತ್ತರ ಪ್ರದೇಶ ಸರ್ಕಾರ ಭದ್ರತೆಯ ಎಲ್ಲ ಕ್ರಮ ಕೈಗೊಂಡಿದೆ. ಆದರೂ, ಹೀಗಾಗಿದ್ದು ಬೇಸರ,ನೋವು ತಂದಿದೆ. ಗಾಯಾಳುಗಳು ಬೇಗ ಚೇತರಿಕೆ ಕಾಣಲಿ ಎಂದು ಹಾರೈಸಿದ್ಧಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ನಾಯಕರು ಮಹಾಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರಸ್ನಾನ ಮಾಡುತ್ತಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟೀಕಿಸಿದ್ದು, ಗಂಗಾಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ.
ಬಿಜೆಪಿ ನಾಯಕರು ಕ್ಯಾಮೆರಾಗಳಿಗಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರು ದ್ರೋಹಿಗಳು. ಧರ್ಮದ ಹೆಸರಿನಲ್ಲಿ ಬಡವರ ಶೋಷಣೆ ಮಾಡುತ್ತಿದ್ದಾರೆ. ಈ ರೀತಿಯ ಶೋಷಣೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದರು. ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿತ್ತು.