ಮಂಗಳೂರು: ಚೈಲ್ಡ್ ಕೇರ್ ಸೆಂಟರ್ ಒಂದರಲ್ಲೇ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಮೀಷನರ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ಮಂಗಳೂರಿನ ಉಳ್ಳಾಲದ ನೂರಾನಿ ಯತೀಂಖಾನ & ದಾರುಲ್ ಮಸಾಕಿನ್ ಸೆಂಟರ್ನಲ್ಲಿ ಇಂತಹ ಕೃತ್ಯ ನಡೆದಿದೆ. ಆಯೂಬ್ (52) ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳವಾಗಿರುವುದಾಗಿ ವರದಿಯಾಗಿದೆ. ಸೆಂಟರ್ನ ಉಸ್ತಾದ್ (ಮುಖ್ಯಸ್ಥ) ಆಗಿರುವ ಈತ 14 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು ಎರಡು ತಿಂಗಳಿನಿಂದ ಕನಿಷ್ಠ ಐದು ಮಕ್ಕಳಿಗೆ ಈ ರೀತಿ ಕಿರುಕುಳ ನೀಡಿದ್ದಾಗಿ ಹೇಳಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಅದರಲ್ಲಿ ಆಯೂಬ್ನ ನಿಜ ಬಣ್ಣ ಬಯಲಾಗಿದೆ. ಈ ಸಂಬಂಧ ಪೋಕ್ಸೋ ಕಾಯಿದೆಯಡಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಾಗಿ ತಿಳಿಸಲಾಗಿದೆ.