ಮಂಡ್ಯ: ಕೆರಗೋಡು ಗ್ರಾಮ ಪಂಚಾಯಿತಿಯ ಗ್ರಾಮವೊಂದರ ಚುನಾವಣೆಯಲ್ಲಿ ತಹಸೀಲ್ದಾರ್ವೊಬ್ಬರು ತನ್ನ ಪತ್ನಿಯನ್ನು ಅವಿರೋಧ ಆಯ್ಕೆ ಮಾಡಿದರೆ 25 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ್ದು, ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಉಪವಿಭಾಗಾಧಿಕಾರಿಗೆ ಸೋಮವಾರ ಸೂಚನೆ ನೀಡಿದ್ದಾರೆ.
ದೇವಸ್ಥಾನ ನಿರ್ಮಾಣ ಸೇರಿದಂತೆ ಗ್ರಾಮ ಅಭಿವೃದ್ಧಿ ಕಾಮಗಾರಿಗೆ ಹಣ ನೀಡುವುದಾಗಿ ತಹಸೀಲ್ದಾರ್ ಭರವಸೆ ನೀಡಿ, ಗ್ರಾಪಂ ಚುನಾವಣೆಯಲ್ಲಿ ತನ್ನ ಪತ್ನಿಯನ್ನು ಅವಿರೋಧ ಆಯ್ಕೆ ಮಾಡಬೇಕು ಎಂದು ಹೇಳಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೊಳಪಟ್ಟಿದೆ.
ಇನ್ನೊಂದೆಡೆ ತಮ್ಮ ತಾಯಿಯನ್ನು ಅವಿರೋಧ ಆಯ್ಕೆ ಮಾಡುವುದಕ್ಕಾಗಿ ಅವರು ಹೇಳಿದ್ದರೆನ್ನುವ ಮಾಹಿತಿಯೂ ಹರಿದಾಡುತ್ತಿದೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯ, ಪುರಾವೆಗಳಿಲ್ಲ. ಹಣ ನೀಡಲು ಒಪ್ಪಿದ್ದಾರೆನ್ನುವುದಕ್ಕೂ ದಾಖಲೆಗಳಿಲ್ಲ. ಆದರೆ ಮಾಹಿತಿ ಮಾತ್ರ ಹರಿದಾಡುತ್ತಿದೆ.
ಈ ಬಗ್ಗೆ 'ವಿಜಯವಾಣಿ'ಯೊಂದಿಗೆ ಮಾತನಾಡಿದ ತಹಸೀಲ್ದಾರ್, ಇದೊಂದು ಸುಳ್ಳು ಮಾಹಿತಿ. ಯಾರೋ ತಪ್ಪು ಮಾಹಿತಿ ಹಬ್ಬಿಸಿದ್ದಾರೆ. ಈ ವಿಷಯದಿಂದ ಬೇಸರವಾಗಿದೆ ಎಂದರು.
ಅವಿರೋಧ ಆಯ್ಕೆ ಸಂಬಂಧ ತಹಸೀಲ್ದಾರ್ ಹಣ ನೀಡುವುದಾಗಿ ಹೇಳಿದ್ದಾರೆನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಮಂಡ್ಯ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಈ ಎಲ್ಲ ಬೆಳವಣಿಗೆ ನಡುವೆ ಗ್ರಾಮಸ್ಥರು ಸೋಮವಾರ ಸಭೆ ಕರೆದು ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಮತ್ತೊಂದೆಡೆ ಅವಿರೋಧ ಚುನಾವಣೆ ಮಾಡಲು ತೀರ್ಮಾನ ಮಾಡಿದ್ದಾರೆಂದು ತಿಳಿದುಬಂದಿದೆ.