ಬಂಧಿತ ಪ್ರವೀಣ್ ಕಾಂಬ್ಳೆ 
ಜಿಲ್ಲೆ

ಚಲಿಸುತ್ತಿದ್ದ ಬಸ್ಸಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ, ಅವಳ ಹತ್ತಿರ ಯಾರೂ ಬರಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ..!

ಬೆಳಗಾವಿ: ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಬಸ್​ನಲ್ಲೇ ಮಹಿಳೆಯೊಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಲ್ಲದೆ, ಆಕೆಯ ಹತ್ತಿರ ಯಾರೂ ಬರಬೇಡಿ ಎಂದು ಬಸ್​ನಲ್ಲಿದ್ದವರಿಗೆ ಎಚ್ಚರಿಕೆಯನ್ನೂ ನೀಡಿದ್ದಾನೆ. ಆದರೆ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಂಧಿಯಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಲೂರು ಕೆ.ಎಂ. ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ತಾಲೂಕಿನ‌ ಮಾಂಗನೂರು ಗ್ರಾಮದ ಪ್ರವೀಣ ಕಾಂಬ್ಳೆ (28) ಎಂಬಾತನನ್ನು ಬಂಧಿಸಲಾಗಿದೆ. ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ವಂದನಾ ಹಟ್ಟಿಕರ (30) ಎಂಬಾಕೆಯೇ ಹಲ್ಲೆಗೊಳಗಾಗಿರುವ ಮಹಿಳೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರದಿಂದ ಬಾಡ್ ಗ್ರಾಮಕ್ಕೆ ತೆರಳುತ್ತಿದ್ದ ಬಸ್​ನಲ್ಲಿ ಈ ಹಲ್ಲೆ ಪ್ರಕರಣ ನಡೆದಿದೆ. ಆಕೆಯ ಮೇಲೆ ಹಲ್ಲೆ ಮಾಡಿದ ಪ್ರವೀಣ್, ಬಸ್​ನಲ್ಲಿದ್ದ ಯಾರೂ ಆಕೆಯ ಬಳಿಗೆ ಸುಳಿಯದಂತೆ ಎಚ್ಚರಿಕೆ ನೀಡಿದ್ದಾನೆ. ಆದರೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಅನೈತಿಕ ಸಂಬಂಧವೇ ಹಲ್ಲೆಗೆ ಕಾರಣ ಎಂದು ಅಂದಾಜಿಸಲಾಗಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.